Index   ವಚನ - 170    Search  
 
ಕೇಡಿಲ್ಲದ ಗುರುವಿಂಗೆ ಕೇಡ ಕಟ್ಟುವರಯ್ಯ. ಕೇಡಿಲ್ಲದ ಲಿಂಗಕ್ಕೆ ಕೇಡ ಕಟ್ಟುವರಯ್ಯ. ಕೇಡಿಲ್ಲದ ಜಂಗಮಕ್ಕೆ ಕೇಡ ಕಟ್ಟುವರಯ್ಯ. ಕೇಡಿಲ್ಲದ ಮಂತ್ರಕ್ಕೆ ಕೇಡಕಟ್ಟಿ, ಆಹ್ವಾನಿಸಿದಲ್ಲಿ ಇದ್ದಿತ್ತು, ವಿಸರ್ಜಿಸಿದಲ್ಲಿ ಮಂತ್ರ ಭಿನ್ನವಾಯಿತ್ತೆಂದು, ಸಂದೇಹದಲ್ಲಿ ಮುಳುಗಿ ಮೂಡುತ್ತಿಪ್ಪರಯ್ಯ. ತನು ಮನ ಭಾವದಲ್ಲಿ ವಜ್ರಲೇಪದಂತೆ ಲೇಪಿಸಿಕೊಂಡು ಒಳಹೊರಗೆ ಓಂನಮಶ್ಯಿವಾಯಯೆನುತ ಸದಾ ಸನ್ನಿಹಿತನಾಗಿಪ್ಪುದನರಿಯದೆ, ಕೆಟ್ಟಿತ್ತು ಇದ್ದಿತ್ತು ಎನ್ನಲೇಕೆ? ಕೆಡುವಾಗ ಹಾಲಂಬಿಲವೇ? ಬಳಸುವಾಗ ಹಾಲೋಗರವೇ? ಅದು ಕೆಡುವುದು ಅಲ್ಲ; ಅಳಿವುದೂ ಅಲ್ಲ. ನಿಮ್ಮ ಸಂಕಲ್ಪ ವಿಕಲ್ಪವೆಂಬ ಸಂದೇಹವೇ ಕೆಡಿಸುತ್ತ ಅಳಿಸುತ್ತ ನಿಮ್ಮ ಕಾಡುತ್ತಿಪ್ಪವು ಕಾಣಿರಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.