Index   ವಚನ - 209    Search  
 
ಪ್ರಣವವೆ ಪರಬ್ರಹ್ಮವು. ಪ್ರಣವವೆ ಪರಾಪರವಸ್ತು. ಪ್ರಣವವೆ ಪರತತ್ವವು. ಪ್ರಣವವೆ ಪರಂಜ್ಯೋತಿ ಪ್ರಕಾಶವು. ಪ್ರಣವವೆ ಪರಶಿವ. ಪ್ರಣವವೇ ಶುದ್ಧಪ್ರಸಾದ. ಪ್ರಣವವೆ ಪರಮಪದ. ಪ್ರಣವವೆ ವೇದಶಾಸ್ತ್ರ ಪುರಾಣಾಗಮಂಗಳುತ್ಪತ್ತಿಗೆ ಕಾರಣ ನೋಡಾ. ಪ್ರಣವವೆ ಸಪ್ತಕೋಟಿ ಮಹಾಮಂತ್ರ, ಅನೇಕಕೋಟಿ ಉಪಮಂತ್ರಂಗಳಿಗೆ ಮಾತೃಸ್ಥಾನ ನೋಡಾ. ಇಂತಪ್ಪ ಶಿವಸ್ವರೂಪವಪ್ಪ ಪ್ರಣವಮಂತ್ರವನೆ ಶುದ್ಧಮಾಯಾಸಂಬಂಧವೆಂಬ ಅಬದ್ಧರ ಎನಗೊಮ್ಮೆ ತೋರದಿರಯ್ಯ. ಮಂತ್ರ ಜಡವಾದಲ್ಲಿಯೆ ಗುರು ಜಡ. ಗುರು ಜಡವಾದಲ್ಲಿಯೆ ಲಿಂಗವು ಜಡ. ಲಿಂಗವು ಜಡವಾದಲ್ಲಿಯೆ ಜಂಗಮವು ಜಡ. ಜಂಗಮವು ಜಡವಾದಲ್ಲಿಯೇ ಪ್ರಸಾದವು ಜಡ. ಪ್ರಸಾದವು ಜಡಯೆಂಬುವರಿಗೆ ಮುಕ್ತಿಯೆಂಬುದು ಎಂದೂ ಇಲ್ಲ. ಮಂತ್ರ ಗುರು ಲಿಂಗ ಜಂಗಮ ಪ್ರಸಾದ ಮುಕ್ತಿ ಈ ಆರು ಸಾಕ್ಷಾತ್ ಶಿವ ತಾನೆಯಲ್ಲದೆ ಬೇರಿಲ್ಲ. ಶಿವ ಬೇರೆ ಇವು ಬೇರೆಯೆಂಬ ಅಜ್ಞಾನ ಕರ್ಮಕಾಂಡಿಗಳ ಪಶುಮತ(ದ)ವರಯೆನಗೊಮ್ಮೆ ತೋರದಿರು. ಇದು ಕಾರಣ, ಪ್ರಣವವೇ ಪರವಸ್ತು. ಪಂಚಾಕ್ಷರವೇ ಪಂಚಮುಖವನ್ನುಳ್ಳ ಪರಮೇಶ್ವರ ತಾನೆ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.