Index   ವಚನ - 227    Search  
 
ತನ್ನಂಗದ ಮೇಲೆ ಶಿವಲಿಂಗವಿದ್ದು ಸತ್ಕ್ರಿಯಾಮುಖದಿಂದ ಲಿಂಗಾರ್ಪಿತವ ಮಾಡಿ ಆ ಲಿಂಗ ಪ್ರಸಾದವ ಕೊಂಬುದೆ ಶಿವಾಚಾರ ಪದ ನೋಡಾ! ಆ ಸದ್ಭಕ್ತನಲ್ಲಿ ಶಿವನಿಪ್ಪನು. ಹೀಂಗಲ್ಲದೆ, ಅಂತರಂಗದಲ್ಲಿ ಆತ್ಮಲಿಂಗವುಂಟೆಂದು ಮನ ಭಾವಂಗಳಿಂದರ್ಪಿತವೆಂದು ಇಷ್ಟಲಿಂಗಾರ್ಪಣವಿಲ್ಲದ ಕರಕಷ್ಟಂಗೆ ಅವನಿಗೆ ಆವ ಸತ್ಯವು ಇಲ್ಲ; ಆವ ಸದಾಚಾರವು ಇಲ್ಲ; ಶಿವಜ್ಞಾನವೆಂಬುದು ಮುನ್ನವೆ ಇಲ್ಲ. ಶಿವಲಿಂಗಾರ್ಪಣ ಹೀನವಾಗಿ ಕೊಂಬುದು ಅದು ಶಿವಜ್ಞಾನವೆ? ಇಂತಪ್ಪ ಅಜ್ಞಾನಿ ಹೊಲೆಯರ ಎನಗೊಮ್ಮೆ ತೋರದಿರಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.