Index   ವಚನ - 230    Search  
 
ರೂಪಾಗಿ ಬಂದ ಪದಾರ್ಥವ ಕಾಯದ ಕೈಯಲ್ಲಿ ಇಷ್ಟಲಿಂಗಕ್ಕೆ ಕೊಟ್ಟು ಶುದ್ಧ ಪ್ರಸಾದವ ಕೊಂಡು ಸರ್ವಾಂಗಶುದ್ಧನಾದೆನು ನೋಡಾ. ರುಚಿಯಾಗಿ ಬಂದ ಪದಾರ್ಥವ ಮನದ ಕೈಯಲ್ಲಿ, ಜಿಹ್ವೆಯ ಮುಖದಲ್ಲಿ ಪ್ರಾಣಲಿಂಗಕ್ಕೆ ಕೊಟ್ಟು ಸಿದ್ಧಪ್ರಸಾದ ಗ್ರಾಹಕನಾಗಿ ಮನ ನಿರ್ಮಲವಾಯಿತ್ತು ನೋಡಾ. ಪರಿಣಾಮವಾಗಿ ಬಂದ ಪದಾರ್ಥವ ಭಾವದ ಕೈಯಲ್ಲಿ, ಹೃದಯದ ಮುಖದಲ್ಲಿ ತೃಪ್ತಿಲಿಂಗಕ್ಕೆ ಕೊಟ್ಟು ಪ್ರಸಿದ್ಧಪ್ರಸಾದವ ಕೊಂಡು ಶುದ್ಧ ಪರಮಾತ್ಮನಾದೆನು ನೋಡಾ. ಈ ಕ್ರಿಯಾಜ್ಞಾನಾರ್ಪಣವಿರಬೇಕು. ಕಾಯವು ಆತ್ಮನು ಬಯಲಾಹನ್ನಕ್ಕರ. ಈ ಕಾಯವೂ ಜೀವವೂ ಪರತತ್ವದಲ್ಲಿ ಅಡಗದೆ, ಬರಿಯ ವಾಗದ್ವೈತದಿಂದ ತಾನೆ ಲಿಂಗವಾದೆನೆಂದು, ಇಷ್ಟಲಿಂಗಾರ್ಪಣವ ಬಿಡುವ ನಾಯ ಮುಖವ ಎನಗೊಮ್ಮೆ ತೋರದಿಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.