Index   ವಚನ - 250    Search  
 
ಭಕ್ತ ಮಾಹೇಶ್ವರ ಪ್ರಸಾದಿಯೆಂದು ಈ ಮೂರು ಕ್ರಿಯಾಂಗವಯ್ಯ. ಪ್ರಾಣಲಿಂಗಿ ಶರಣ ಐಕ್ಯವೆಂದು ಈ ಮೂರು ಜ್ಞಾನಾಂಗವಯ್ಯ. ಆಚಾರಲಿಂಗ ಗುರುಲಿಂಗ ಶಿವಲಿಂಗವೆಂದು ಈ ಮೂರು ಕ್ರಿಯಾಲಿಂಗವಯ್ಯ. ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂದು ಈ ಮೂರು ಜ್ಞಾನಲಿಂಗವಯ್ಯ. ಇವಕ್ಕೆ ಅಂಗ ಲಿಂಗ ಸಂಗ ಸಂಯೋಗನಿರ್ದೇಶವ ಹೇಳಿಹೆನು. ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದು ಆ ಆರು ಕ್ರಿಯಾಂಗವು. ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂದು ಲಿಂಗವಾರು ತೆರನಾಗಿಪ್ಪುದಯ್ಯ. ಇನ್ನು ಸಂಗವಾರು ತೆರನದೆಂತೆಂದಡೆ: ಘ್ರಾಣ, ಜಿಹ್ವೆ, ನೇತ್ರ, ತ್ವಕ್ಕು, ಶ್ರೋತ್ರ, ಭಾವವೆಂದು ಸಂಗವಾರು ತೆರನಾಗಿಪ್ಪುದಯ್ಯ. ಘ್ರಾಣದಲ್ಲಿ ಆಚಾರಲಿಂಗ, ಜಿಹ್ವೆಯಲ್ಲಿ ಗುರುಲಿಂಗ; ನೇತ್ರದಲ್ಲಿ ಶಿವಲಿಂಗ; ತ್ವಕ್ಕಿನಲ್ಲಿ ಜಂಗಮಲಿಂಗ; ಶ್ರೋತ್ರದಲ್ಲಿ ಪ್ರಸಾದಲಿಂಗ; ಭಾವದಲ್ಲಿ ಮಹಾಲಿಂಗ ಸಂಬಂಧ. ಇಂತೀ ಷಂಡಗವು ಷಡ್ವಿಧಲಿಂಗದಲ್ಲಿ ಸಮರಸ ಸಂಯೋಗವಾದಲ್ಲಿ ಅಂಗ ಲಿಂಗ ಸಂಬಂಧವೆನಿಸಿಕೊಂಡಿತಯ್ಯ. ಇನ್ನು ಪ್ರಾಣಾಂಗವಾರು ತೆರನದೆಂತೆಂದಡೆ: ಸುಚಿತ್ತ, ಸುಬುದ್ಧಿ, ನಿರಹಂಕಾರ, ಸುಮನ, ಸುಜ್ಞಾನ, ಶುದ್ಧಾತ್ಮ ಆ ಆರು ಪ್ರಾಣಾಂಗಗಳು. ಇಂತೀ ಪ್ರಾಣಾಂಗಂಗಳಲ್ಲಿಯೂ ಹಿಂದೆ ಹೇಳಿದ ಷಡ್ವಿಧ ಲಿಂಗವು ಮಾರ್ಗ ಕ್ರೀಯನೆಯ್ದಿ ಮೀರಿದ ಕ್ರಿಯಾಸ್ಥಲದಲ್ಲಿ ಬಂದು ನಿಂದು ಜ್ಞಾನಗಮ್ಯವಾಗಿ ಸಂಗದನುವನರಿದು ಪ್ರಾಣಾಂಗವಾರೂ ಲಿಂಗಸಂಬಂಧವಾದವಯ್ಯ. ಹಿಂದೆ ಹೇಳಿದ ಕ್ರಿಯಾಂಗವಾರು ಮುಂದೆ ಹೇಳುವ ಸುಚಿತ್ತಾದಿ ಭಾವಾಂತ್ಯವಹ ಜ್ಞಾನಾಂಗವಾರು. ಈ ಉಭಯಾಂಗವು ಲಿಂಗಸಂಗದಿಂದ ಲಿಂಗಕ್ಕೆ ಅಂಗಕ್ಕೆ ಆಶ್ರಯಸ್ಥಾನನಾಗಿ ನಿಂದ ನಿರುಪಮ ಮಹಿಮ ಶರಣ ತಾನೆ ಅಂಗಲಿಂಗ ಪ್ರಾಣಲಿಂಗ ಸಂಬಂಧಿಯೆನಿಸಿಕೊಂಬನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.