ತನ್ನ ಸತಿ, ತನ್ನ ಧನ ಉನ್ನತಿಯಲಿರಬೇಕು.
ಅನ್ಯ ಸತಿ, ಅನ್ಯ ಧನದಾಸೆಯನ್ನು
ಬಿಡಬೇಕೆಂಬುದು ನೋಡಾ, ಜಗ.
ತನ್ನ ಸತಿಯಾರು ಅನ್ಯಸತಿಯಾರೆಂದು
ಬಲ್ಲವರುಂಟೆ ಹೇಳ ಮರುಳೆ,
ಬಲ್ಲವರುಂಟುಂಟು ಶಿವಶರಣರು.
ತನ್ನ ಶಕ್ತಿಯೆ ಶಿವಶಕ್ತಿ;
ಅನ್ಯಶಕ್ತಿಯು ಮಾಯಾಶಕ್ತಿ ಕಾಣಾ ಮರುಳೆ.
ಇದು ಕಾರಣ,
ಮಾಯಾಶಕ್ತಿಯ ಸಂಗ ಭಂಗವೆಂದು ನಿವೃತ್ತಿಯ ಮಾಡಿ
ಶಿವಶಕ್ತಿಸಂಪನ್ನರಾಗಿ
ಶಿವಲಿಂಗವ ನೆರೆವರಯ್ಯ ನಿಮ್ಮ ಶರಣರು.
ಇದು ಕಾರಣ,
ಶರಣಂಗೆ ಅನ್ಯಸ್ತ್ರೀಯ ಸಂಗ ಅಘೋರನರಕ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.