Index   ವಚನ - 295    Search  
 
ಭೂಲೋಕದಲ್ಲಿ ಕುಳ್ಳಿರ್ದು ಆಕಾಶದ ಸುದ್ದಿಯ ನುಡಿದರೆ ಆಕಾಶದ ನೆಲೆಯ ಬಲ್ಲರೆ ಅಯ್ಯ? ಪಾತಾಳಲೋಕದಲ್ಲಿದ್ದವರು ಕೈಲಾಸದ ಸುದ್ದಿಯ ನುಡಿದರೆ ಕಂಡಂತೆ ಆಗಬಲ್ಲುದೆ ಅಯ್ಯ? ತತ್ವಶಾಸ್ತ್ರವನೋದಿ ತತ್ವಮಸ್ಯಾದಿ ವಾಕ್ಯಾರ್ಥಂಗಳ ತಿಳಿದು ತತ್ವಮಸಿಯಾದನೆಂಬವರೆಲ್ಲಾ ಎತ್ತ ಹೋದರೋ? ವ್ಯರ್ಥವಾಗಿ ಸತ್ತು ಹೋದರಲ್ಲ. ಇದು ಕಾರಣ, ನಿಮ್ಮ ಶರಣರು ಉತ್ಪತ್ತಿ ಸ್ಥಿತಿ ಪ್ರಳಯರಹಿತವಾದ ಮಹಾಲಿಂಗದಲ್ಲಿ ಸಂಯೋಗವಾದ ಅಚ್ಚ ಲಿಂಗೈಕ್ಯರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.