Index   ವಚನ - 317    Search  
 
ಹಿರಿಯ ಕಡಲನೊಂದು ಮಂಡುಕ ಕುಡಿವುದ ಕಂಡೆನಯ್ಯ. ಮಂಡೂಕನ ಮಾರ್ಜಾಲ ಹಿಡಿದಿದೆ ನೋಡಾ. ಮಾರ್ಜಾಲನ ಮೂಷಕ ನುಂಗಿದುದ ಕಂಡೆನಯ್ಯ. ಮೂಷಕನ ಮೂವರ್ಣದ ಪಕ್ಷಿ ಹಿಡಿದು ಮೈದೋರದು ನೋಡಾ. ಇವೆಲ್ಲವ ಕೂಡಿಕೊಂಡು ಇಪ್ಪುದೊಂದು ಕೊಟ್ಟದ ಗ್ರಾಮವ ಕಂಡೆನಯ್ಯ. ಆ ಗ್ರಾಮದ ಬಾಗಿಲೊಳಗೊಬ್ಬ ಕರಿಯ ಕಬ್ಬಿಲನಿದ್ದು ಜಾಲವ ಬೀಸಿ ಕೊಂಡೈದಾನೆ ನೋಡಾ. ಆ ಜಾಲದೊಳಗೆ ಹರಿಬ್ರಹ್ಮದೇವತಾದಿಗಳು ಸಿಕ್ಕಿ ಒದ್ದಾಡುತ್ತಿದ್ದಾರೆ ನೋಡಾ. ಆ ಜಾಲದ ಹರಿದು, ಕರಿಯ, ಕಬ್ಬಿಲನ ಕೈಕಾಲು ಕಡಿದು, ಕಿವಿ, ಮೂಗುನುತ್ತರಿಸಿಯಲ್ಲದೆ ಪ್ರಾಣಲಿಂಗಸಂಬಂಧಿಯಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.