Index   ವಚನ - 335    Search  
 
ಆಕಾಶದೊಳಗಣ ಆಕಾಶ, ಜ್ಞಾನ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಆಕಾಶದೊಳಗಣ ವಾಯು, ಮನಸ್ಸು; ಅಲ್ಲಿ ಜಂಗಮಲಿಂಗ ಸ್ವಾಯತ. ಆಕಾಶದೊಳಗಣ ಅಗ್ನಿ, ಅಹಂಕಾರ; ಅಲ್ಲಿ ಶಿವಲಿಂಗ ಸ್ವಾಯತ. ಆಕಾಶದೊಳಗಣ ಅಪ್ಪು, ಚಿತ್ತ; ಅಲ್ಲಿ ಗುರುಲಿಂಗ ಸ್ವಾಯತ. ಆಕಾಶದೊಳಗಣ ಪೃಥ್ವಿ, ಬುದ್ಧಿ; ಅಲ್ಲಿ ಆಚಾರಲಿಂಗ ಸ್ವಾಯತ. ಹೀಂಗೆ ಪಂಚಕರಣಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ವಾಯುವಿನೊಳಗಣ ವಾಯು, ವಾನವಾಯು; ಅಲ್ಲಿ ಜಂಗಮಲಿಂಗ ಸ್ವಾಯತ. ವಾಯುವಿನೊಳಗಣ ಆಕಾಶ, ಸಮಾನವಾಯು; ಅಲ್ಲಿ ಪ್ರಸಾದಲಿಂಗ ಸ್ವಾಯತ, ವಾಯುವಿನೊಳಗಣ ಅಗ್ನಿ, ಉದಾನವಾಯು; ಅಲ್ಲಿ ಶಿವಲಿಂಗ ಸ್ವಾಯತ. ವಾಯುವಿನೊಳಗಣ ಅಪ್ಪು, ಅಪಾನವಾಯು; ಅಲ್ಲಿ ಗುರುಲಿಂಗ ಸ್ವಾಯತ. ವಾಯುವಿನೊಳಗಣ ಪೃಥ್ವಿ, ಪ್ರಾಣವಾಯು; ಅಲ್ಲಿ ಆಚಾರಲಿಂಗ ಸ್ವಾಯತ. ಹೀಂಗೆ ವಾಯುಪಂಚಕದಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಅಗ್ನಿಯೊಳಗಣ ಅಗ್ನಿ, ನೇತ್ರೇಂದ್ರಿಯ; ಅಲ್ಲಿ ಶಿವಲಿಂಗ ಸ್ವಾಯತ. ಅಗ್ನಿಯೊಳಗಣ ಆಕಾಶ, ಶ್ರೋತ್ರೇಂದ್ರಿಯ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಅಗ್ನಿಯೊಳಗಣ ವಾಯು ತ್ವಗಿಂದ್ರಿಯ; ಅಲ್ಲಿ ಜಂಗಮಲಿಂಗ ಸ್ವಾಯತ. ಅಗ್ನಿಯೊಳಗಣ ಅಪ್ಪು, ಜಿಹ್ವೇಂದ್ರಿಯ; ಅಲ್ಲಿ ಗುರುಲಿಂಗ ಸ್ವಾಯತ. ಅಗ್ನಿಯೊಳಗಣ ಪೃಥ್ವಿ, ಘ್ರಾಣೇಂದ್ರಿಯ; ಅಲ್ಲಿ ಆಚಾರಲಿಂಗ ಸ್ವಾಯತ. ಹೀಂಗೆ ಬುದ್ಧೀಂದ್ರಿಯಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಅಪ್ಪುವಿನೊಳಗಣ ಅಪ್ಪು, ರಸ; ಅಲ್ಲಿ ಗುರುಲಿಂಗ ಸ್ವಾಯತ. ಅಪ್ಪುವಿನೊಳಗಣ ಆಕಾಶ, ಶಬ್ದ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಅಪ್ಪುವಿನೊಳಗಣ ವಾಯು, ಸ್ಪರ್ಶನ; ಅಲ್ಲಿ ಜಂಗಮಲಿಂಗ ಸ್ವಾಯತ. ಅಪ್ಪುವಿನೊಳಗಣ ಅಗ್ನಿ ರೂಪು; ಅಲ್ಲಿ ಶಿವಲಿಂಗ ಸ್ವಾಯತ. ಅಪ್ಪುವಿನೊಳಗಣ ಪೃಥ್ವಿ ಗಂಧ; ಅಲ್ಲಿ ಆಚಾರಲಿಂಗ ಸ್ವಾಯತ. ಹೀಂಗೆ ಪಂಚವಿಷಯಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಪೃಥ್ವಿಯೊಳಗಣ ಪೃಥ್ವಿ, ಪಾಯ್ವಿಂದ್ರಿಯ; ಅಲ್ಲಿ ಆಚಾರಲಿಂಗ ಸ್ವಾಯತ. ಪೃಥ್ವಿಯೊಳಗಣ ಆಕಾಶ, ವಾಗಿಂದ್ರಿಯ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಪೃಥ್ವಿಯೊಳಗಣ ವಾಯು, ಪಾಣೀಂದ್ರಿಯ; ಅಲ್ಲಿ ಜಂಗಮಲಿಂಗ ಸ್ವಾಯತ. ಪೃಥ್ವಿಯೊಳಗಣ ಅಗ್ನಿ, ಪಾದೇಂದ್ರಿಯ; ಅಲ್ಲಿ ಶಿವಲಿಂಗ ಸ್ವಾಯತ. ಪೃಥ್ವಿಯೊಳಗಣ ಅಪ್ಪು, ಗುಹ್ವೇಂದ್ರಿಯ; ಅಲ್ಲಿ ಗುರುಲಿಂಗ ಸ್ವಾಯತ. ಹೀಂಗೆ ಪಂಚಕರ್ಮೇಂದ್ರಿಯಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಆತ್ಮನೊಳಗಣ ಆತ್ಮ,ಶುದ್ಧಾತ್ಮ; ಅಲ್ಲಿ ಮಹಾಲಿಂಗ ಸ್ವಾಯತ. ಆತ್ಮನೊಳಗಣ ಆಕಾಶ, ಸುಜ್ಞಾನ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಆತ್ಮನೊಳಗಣ ವಾಯು, ಸುಮನ; ಅಲ್ಲಿ ಜಂಗಮಲಿಂಗ ಸ್ವಾಯತ. ಆತ್ಮನೊಳಗಣ ಅಗ್ನಿ, ನಿರಹಂಕಾರ; ಅಲ್ಲಿ ಶಿವಲಿಂಗ ಸ್ವಾಯತ. ಆತ್ಮನೊಳಗಣ ಅಪ್ಪು, ಸುಬುದ್ಧಿ; ಅಲ್ಲಿ ಗುರುಲಿಂಗ ಸ್ವಾಯತ. ಆತ್ಮನೊಳಗಣ ಪೃಥ್ವಿ, ಸುಚಿತ್ತ; ಅಲ್ಲಿ ಆಚಾರಲಿಂಗ ಸ್ವಾಯತ. ಇಂತೀ ಪ್ರಾಣಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಇಂತೀ ಅಂಗ ಪ್ರಾಣಂಗಳಲ್ಲಿಯು ಲಿಂಗವೇ ಎಡೆಕಡೆಯಿಲ್ಲದ ಪ್ರಭೇದವನರಿದಾತನೆ ಸರ್ವಾಂಗಲಿಂಗಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.