Index   ವಚನ - 358    Search  
 
ಲಂಬಿಕಾ ಯೋಗಿಗಳ ಡೊಂಬರಿಗೆ ಸರಿಯೆಂಬೆ. ಹಠಯೋಗಿಗಳ ಅಟಮಟಗಾರರೆಂದೆಂಬೆ. ಅಷ್ಟಾಂಗ ಯೋಗಿಗಳ ಕಷ್ಟ ಕರ್ಮಿಗಳೆಂದೆಂಬೆ. ಪವನ ಯೋಗಿಗಳ ಪ್ರಪಂಚಿಗಳೆಂದೆಂಬೆ. ಲಯ ಯೋಗಿಗಳ ನಾಯಿಗಿಂದ ಕಡೆ ಎಂಬೆ. ಅದೇನು ಕಾರಣವೆಂದರೆ; ಲಯಯೋಗವೆಂಬುವದು ನಾನಾ ದರುಶನದಲ್ಲಿ ವರ್ತಿಸುವುದಾಗಿ ಆದ ಶಿವಯೋಗಿಗಳು ಒಲ್ಲರು. ಮಂತ್ರ ಯೋಗವೆಂಬುವದು ಸರ್ವ ಸಂದೇಹಕ್ಕಿಕ್ಕಿ ಕೊಲುತಿಪ್ಪುದು. ಅದೇನು ಕಾರಣವೆಂದಡೆ: ಮಂತ್ರವೇ ಲಿಂಗ, ಲಿಂಗವೇ ಮಂತ್ರವೆಂದರಿದು ಲಿಂಗನೆನಹ ಸಂಬಂಧಿಸಿಕೊಳ್ಳಲರಿಯದೆ ಲಿಂಗ ವಿರಹಿತವಾಗಿ ಮಾಡುತಿಪ್ಪರಾಗಿ. ಅದು ಅಂಗ ಲಿಂಗ ಸಂಬಂಧಿಗಳು ಮಚ್ಚರು ನೋಡಾ. ಅದೇನು ಕಾರಣವೆಂದರೆ: ಕೆಲವು ಶೈವರುಗಳು ಮಾಡುವರಾಗಿ ರಾಜಯೋಗವೆಂಬುವದು ಗಾಜು ಗೋಜು ನೋಡಾ. ಅದನು ಲಿಂಗವಿರಹಿತವಾಗಿ ಜ್ಞಾತೃ ಜ್ಞಾನ, ಜ್ಞೇಯ ಒಂದಾದಲ್ಲಿಯೆ ಯೋಗವೆನುತಿಪ್ಪರಾಗಿ. ಇವು ಒಂದೂ ಲಿಂಗಾಂಗ ಯೋಗದ ಹೆಜ್ಜೆಯಲ್ಲ ನೋಡಾ. ಅದು ಕಾರಣ, ಲಿಂಗನಿಷ್ಠರು ಮಚ್ಚರು. ಅದೇನು ಕಾರಣವೆಂದಡೆ: ಲಿಂಗವ ತೆಗೆದಡೆ ಲಿಂಗದೊಡನೆ ಪ್ರಾಣ ಹೋಗದಾಗಿ, ಅದೆಲ್ಲಿಯ ಯೋಗವಯ್ಯ ಭ್ರಾಂತುಯೋಗ. ಇದು ಕಾರಣ, ನಿಮ್ಮ ಶರಣರು ಲಿಂಗಪ್ರಾಣಿಗಳು; ಪ್ರಾಣಲಿಂಗಸಂಬಂಧಿಗಳು; ಪ್ರಸಾದಮುಕ್ತರು ಈ ಮೂರು ಪ್ರಕಾರದಲ್ಲಿ ಕೂಡುತ್ತಿಪ್ಪರು ಶಿವಯೋಗಿಗಳು. ಇದುಕಾರಣ ನಿಮ್ಮ ಶರಣರು ಸ್ವಾನುಭಾವಜ್ಞಾನ ಶುದ್ಧಶಿವಯೋಗದಲ್ಲಿ ಸ್ವರೂಪಜ್ಞಾನಿಗಳು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.