ಆಗಮಮೂರ್ತಿ ಅಂತರಾತ್ಮನೊಳಿರುತಿರೆ
ಆಗಮವನರಿಯಬೇಕೆಂದೇನು ಹೇಳಿರೋ?
ಆಗಮವ ವಿಚಾರಿಸಿ ಅರಿಯಬೇಕೆಂಬ ಅರುಹು ಲೋಗರಿಗಲ್ಲದೆ
ಆಗಮಮೂರ್ತಿಯೇ ತಾನಾದರುಹು ಕುರುಹುಗೊಂಡ ಮೂರ್ತಿಗೆ
ಆಗಮವಿಚಾರವೆಂದೇನು ಹೇಳ?
ಆಗಮ, ಅರುಹಿನಮೂರ್ತಿ ಮಾಡಿದರಾದವು ಕಾಣಿರಣ್ಣಾ.
ವೇದ, ವಿವೇಕಿ ನುಡಿದರಾದವು ಕಾಣಿರಣ್ಣಾ.
ಶಾಸ್ತ್ರ, ಸರ್ವಜ್ಞ ನಿರ್ಮಿಸಿದರಾದವು ಕಾಣಿರಣ್ಣಾ.
ಪುರಾಣ ಅಗ್ರಗಣ್ಯ ಆಗೆಂದರಾದವು ಕಾಣಿರಣ್ಣಾ.
ತರ್ಕವ ಅತರ್ರ್ಕ್ಯನು, ಅರ್ಥಿಗೆ ಆಡಿಸಾಡಿ ನೋಡಬೇಕೆಂದು
ಮಾಡಿದ ನೋಡಾ.
ವೇದ ಶಾಸ್ತ್ರ, ಪುರಾಣಾಗಮ ತರ್ಕ ಇವು ಉಪಮೆಯೊಳಗು.
ಉಪಮೆಗೊಳಗಾದವು ಉಪಮಾತೀತನ ಇವೆತ್ತ ಬಲ್ಲವು ಹೇಳ?
ಆತ್ಮಲಿಂಗದ ಆದ್ಯಂತವನರಿಯದೆ
ದ್ವೈತಾದ್ವೈತಿಗಳೆಂದು ನುಡಿದುಕೊಂಡು ನಡೆವ
ಭವರೋಗಿಗಳನೇನೆಂಬೆನಯ್ಯ?
ಆಗಮಮೂರ್ತಿ, ಅಂತರಂಗ ಬಹಿರಂಗ
ಸರ್ವಾಂಗ ಅಂತರ್ಯಾಮಿಯಾಗಿಹುದ
ಶಿವ ಪ್ರಸನ್ನ ಪ್ರಸಾದದಿಂದೊದಗಿದ ಸ್ವಾನುಭಾವಿ ಬಲ್ಲ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನಲ್ಲಿ?
ಬಸವಣ್ಣ, ಪ್ರಭು, ಚೆನ್ನಬಸವಣ್ಣ ಮುಖ್ಯರಾದ
ನಮ್ಮ ಪ್ರಮಥರು ಬಲ್ಲರು ಶಿವನ ಘನವ.
Art
Manuscript
Music
Courtesy:
Transliteration
Āgamamūrti antarātmanoḷirutire
āgamavanariyabēkendēnu hēḷirō?
Āgamava vicārisi ariyabēkemba aruhu lōgarigallade
āgamamūrtiyē tānādaruhu kuruhugoṇḍa mūrtige
āgamavicāravendēnu hēḷa?
Āgama, aruhinamūrti māḍidarādavu kāṇiraṇṇā.
Vēda, vivēki nuḍidarādavu kāṇiraṇṇā.
Śāstra, sarvajña nirmisidarādavu kāṇiraṇṇā.
Purāṇa agragaṇya āgendarādavu kāṇiraṇṇā.
Tarkava atarrkyanu, arthige āḍisāḍi nōḍabēkendu
māḍida nōḍā.
Vēda śāstra, purāṇāgama tarka ivu upameyoḷagu.
Upamegoḷagādavu upamātītana ivetta ballavu hēḷa?
Ātmaliṅgada ādyantavanariyade
dvaitādvaitigaḷendu nuḍidukoṇḍu naḍeva
bhavarōgigaḷanēnembenayya?
Āgamamūrti, antaraṅga bahiraṅga
sarvāṅga antaryāmiyāgihuda
śiva prasanna prasādadindodagida svānubhāvi balla.
Mahāliṅgaguru śivasid'dhēśvara prabhuvinalli?
Basavaṇṇa, prabhu, cennabasavaṇṇa mukhyarāda
nam'ma pramatharu ballaru śivana ghanava.
ಸ್ಥಲ -
ಪ್ರಾಣಲಿಂಗಿಸ್ಥಲದ ವಚನ