Index   ವಚನ - 398    Search  
 
ಮೊಲನ ಕಂಡ ನಾಯಂತೆ ಇಂದ್ರಿಯವಿಷಯಕ್ಕೆ ಮುಂದುವರಿಯದಿರಾ. ಅಂಗನೆಯರ ಸಮ್ಮೇಳದಿಂ ಭಂಗಿತನಾಗದಿರಾ. ಲಿಂಗವನಪ್ಪಿ ಸುಖಿಯಾಗಿ ಎಲೆ ಮನವೆ. ಅಂಗದಿಚ್ಛೆಗೆ ಆಯಸಂಬಡದಿರಾ. ಲಿಂಗ ಸಂಗಿಗಳು ನೋಡಿ ನಗುವರೆಲೆ[ಲೆಲೆ] ಮನವೇ. ಇಂದ್ರಿಯಭೋಗಂಗಳೆಂಬವು ಕನಸಿನ ಸಿರಿಯಂತೆ ತೋರಿ ಅಡಗುವವೋ. ಇವನೇಕೆ ನಚ್ಚುವೆ ಮಚ್ಚುವೆ ಹುಚ್ಚು ಮನವೇ? ಹರಹರಾ ಶಿವ ಶಿವಾ ಎನ್ನೆಯೋ ಎಲೆಲೆ ಮನವೆ. ನಿನ್ನ ನಾ ಬೇಡಕೊಂಬೆನಯ್ಯೋ ಎಲೆಲೆ ಮನವೇ. ಸಿಂಹನ ಕಂಡ ಕರಿಯಂತೆ ಕೆಡೆಬಡೆದೋಡದರಿಯ್ಯೋ ಪಾಪಿ ಮನವೇ. ಲಿಂಗ ಪದವ ಸಾರಿ, ಶಿವಭಕ್ತನಾಗಿ ಮುಕ್ತಿಸಮ್ಮೇಳನಾಗಯ್ಯ. ಕರ್ತೃ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವನೊಡಗೂಡಿ, ನಿತ್ಯನಾಗಬಲ್ಲರೆಲೆಲೆ ಮನವೇ.