Index   ವಚನ - 410    Search  
 
ಭಕ್ತಂಗೆ ಹಸ್ತವಾವುದು, ಮಾಹೇಶ್ವರಂಗೆ ಹಸ್ತವಾವುದು, ಪ್ರಸಾದಿಗೆ ಹಸ್ತವಾವುದು, ಪ್ರಾಣಲಿಂಗಿಗೆ ಹಸ್ತವಾವುದು, ಶರಣಂಗೆ ಹಸ್ತವಾವುದು, ಐಕ್ಯಂಗೆ ಹಸ್ತವಾವುದು ಎಂದರೆ, ಈ ಹಸ್ತಂಗಳ ಭೇದವ ಹೇಳಿಹೆನಯ್ಯ: ಭಕ್ತಂಗೆ ಸುಚಿತ್ತವೇ ಹಸ್ತ. ಮಾಹೇಶ್ವರಂಗೆ ಸುಬುದ್ಧಿಯೇ ಹಸ್ತ. ಪ್ರಸಾದಿಗೆ ನಿರಹಂಕಾರವೆ ಹಸ್ತ. ಪ್ರಾಣಲಿಂಗಿಗೆ ಸುಮನವೆ ಹಸ್ತ. ಶರಣಂಗೆ ಸುಜ್ಞಾನವೆ ಹಸ್ತ ಐಕ್ಯಂಗೆ ಸದ್ಭಾವವೆ ಹಸ್ತ. ಇಂತಿ ಹಸ್ತಂಗಳ ಭೇದವ ತಿಳಿವುದಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.