ಪೃಥ್ವಿ, ಸುಚಿತ್ತ, ಘ್ರಾಣ, ಗಂಧ, ಪಾಯ್ವಿಂದ್ರಿಯ ಇವು
ಭಕ್ತನಂಗ ಮುಖಂಗಳು.
ಆ ಭಕ್ತಂಗೆ ಆಚಾರಲಿಂಗವೇ ಪ್ರಾಣವಾಗಿಪ್ಪುದಯ್ಯ.
ಅಪ್ಪು, ಸುಬುದ್ಧಿ, ಜಿಹ್ವೆ, ರಸ, ಗುಹ್ಯ ಈ ಐದು
ಮಹೇಶ್ವರನ ಅಂಗಮುಖಂಗಳು,
ಆ ಮಹೇಶ್ವರಂಗೆ ಗುರುಲಿಂಗವೇ ಪ್ರಾಣವಾಗಿಪ್ಪುದಯ್ಯ.
ಅಗ್ನಿ, ನಿರಹಂಕಾರ, ನೇತ್ರ, ರೂಪು, ಪಾದ ಈ ಐದು
ಪ್ರಸಾದಿಯ ಅಂಗಮುಖಂಗಳು.
ಆ ಪ್ರಸಾದಿಗೆ ಶಿವಲಿಂಗವೇ ಪ್ರಾಣಲಿಂಗವಾಗಿಪ್ಪುದಯ್ಯ.
ವಾಯು, ಸುಮನ, ತ್ವಕ್ಕು, ಸ್ಪರ್ಶನ, ಪಾಣಿ ಈ ಐದು
ಪ್ರಾಣಲಿಂಗಿಯ ಅಂಗಮುಖಂಗಳು.
ಆ ಪ್ರಾಣಲಿಂಗಿಗೆ ಜಂಗಮಲಿಂಗವೇ ಪ್ರಾಣವಾಗಿಪ್ಪುದಯ್ಯ.
ಆಕಾಶ, ಸುಜ್ಞಾನ, ಶ್ರೋತ್ರ, ಶಬ್ದ, ವಾಕು ಈ ಐದು
ಶರಣನ ಅಂಗಮುಖಂಗಳು.
ಆ ಶರಣನಿಗೆ ಪ್ರಸಾದಲಿಂಗವೇ ಪ್ರಾಣವಾಗಿಪ್ಪುದಯ್ಯ.
ಆತ್ಮ, ಸದ್ಭಾವ, ಮನ, ನೆನಹು, ಪರಿಣಾಮ ಈ ಐದು
ಐಕ್ಯನ ಅಂಗಮುಖಂಗಳು.
ಆ ಐಕ್ಯಂಗೆ ಮಹಾಲಿಂಗವೇ ಪ್ರಾಣವಾಗಿಪ್ಪುದಯ್ಯ.
ಇಂತೀ ಅಂಗಮುಖವನರಿದು
ಲಿಂಗಮುಖವ ಮಾಡಬಲ್ಲರೆ ಪ್ರಸಾದಿಯೆಂಬೆನಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.