Index   ವಚನ - 446    Search  
 
ಸಪ್ತದ್ವೀಪದ ಮಧ್ಯದಲ್ಲಿ ಇಪ್ಪತ್ತೈದು ಕೊನೆಯ ವೃಕ್ಷವ ಕಂಡೆನಯ್ಯ. ಎಂಟರಾದಿಯಲ್ಲಿ ನಿಂದು ಏಳರ ನೀರನಲ್ಲಿ ಬೆಳೆದು ಆರರ ಭ್ರಮೆಯಲ್ಲಿ ಮುಳುಗಿ ಮೂಡುತ್ತಿಹುದು. ಹತ್ತರ ಹಾದಿಯಲ್ಲಿ ಹರಿದು ಹಬ್ಬಿ ಕೊಬ್ಬುವುದಯ್ಯ. ಎಲೆ ಹೂವು ಫಲವು ಹಲವಾಗಿಪ್ಪುದಯ್ಯ. ಸಪ್ತದ್ವೀಪವೂ ಅಲ್ಲ; ಇಪ್ಪತ್ತೈದು ಕೊನೆಯೂ ಅಲ್ಲ; ಎಂಟಲ್ಲ, ಏಳಲ್ಲ, ಆರರ ಭ್ರಮೆಯಲ್ಲ; ಹತ್ತರ ಹಾದಿಯಲ್ಲಿ ಹರಿದು ಹಬ್ಬಿ ಕೊಬ್ಬುವುದಿಲ್ಲ; ಎಲೆ ಹೂವು ಫಲವು ಹಲವಾಗಿ ತೋರುವ ತೋರಿಕೆ ತಾನಲ್ಲವೆಂದು ನಡುವಣ ವೃಕ್ಷದ ನೆಲೆಯ ನಿರ್ಣಯವ ತಿಳಿದಾತನಲ್ಲದೆ ಸಲೆ ಶಿವಶರಣನಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.