Index   ವಚನ - 465    Search  
 
ಪಂಚಮುದ್ರೆ ಪಂಚಮುದ್ರೆಯೆಂದೇನೋ? ಹೇಳಿಹೆ ಕೇಳಿ; ಸರ್ವಾಂಗವನು ಸಮತೆಯೆಂಬ ಸದಾಚಾರದಲ್ಲಿಯೆ ನೆಲೆಗೊಳಿಸಿದ್ದುದೇ ಕಂಥೆಯಯ್ಯ. ಸುಬುದ್ಧಿಯೆಂಬ ಮಕುಟಕ್ಕೆ ಅರುಹೆಂಬ ಬಟ್ಟಪಾವಡೆ, ಕ್ರೀಯೆಂಬ ಪಾಗ. ವಿಚಾರದಿಂದ ಬಳಸಿ ಸುತ್ತಬೇಕು ಕಾಣಿರಣ್ಣಾ. ದೃಢವೆಂಬ ದಂಡ, ವಿವೇಕವೆಂಬ ಕಪ್ಪರವ ಹಿಡಿಯಬೇಕು ಕಾಣಿರಯ್ಯ. ಜ್ಞಾನವೆಂಬ ಭಸ್ಮಘುಟಿಕೆ ಸುಮನವೆಂಬ ಗಮನ, ಸುಚಿತ್ತವೆಂಬ ಸುಳುಹು, ಪರತತ್ವ ಸದ್ಭಾವದಿಂದ ಪರಮದೇಹಿಯೆಂದು ಸುಳಿವ ಪರದೇಶಿಕನ ತೋರಿ ಬದುಕಿಸಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.