Index   ವಚನ - 466    Search  
 
ಕಬ್ಬಿನ ಹೊರಗಣ ಸೋಗೆಯ ಮೆದ್ದು ಪರಿಣಾಮಿಸುವ ಪಶುವಿನಂತೆ, ಹೊರವೇಷವ ಹಲ್ಲಣಿಸಿಕೊಂಡು ಈಶ್ವರೋವಾಚದ ನುಡಿಯ ನುಡಿದು ಬಲ್ಲವರೆನಿಸಿಕೊಳಬಹುದಲ್ಲದೆ, ಈಶ್ವರನ ನಿಲವ ಈ ಉಪಚಾರದಲ್ಲಿ ಕಾಣಬಹುದೆ? ಕಾಣಬಾರದು ಕಾಣಿರಯ್ಯ. ಕಬ್ಬ ಕಡಿದು ಒಳಗಣ ಮಧುರವ ಸ್ವೀಕರಿಸುವ ಮದಗಜದಂತೆ ಅಂತರಂಗದ ನಿಳಯದಲಿ ನಿಜವ ಕಂಡು ನಿವಾಸಿಗಳಾಗಿ ಚಿದಂಗ ಚಿತ್ಪ್ರಾಣ ಚಿಚ್ಛಕ್ತಿ ಚಿದಾಕಾಶವೆನಿಸುವ ಚಿದ್ಬ್ರಹ್ಮವೇ ಸ್ಥಳಕುಳವೆಂದರಿದು ಸುಳಿಯಬಲ್ಲರೆ ಸ್ಥಲಜ್ಞರೆಂಬೆ. ಉಳಿದವರೆಲ್ಲಾ ಹುಸಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.