Index   ವಚನ - 476    Search  
 
ಪಂಚಭೂತೇಂದ್ರಿಯಂಗಳ ವಂಚನೆಯನತಿಗಳೆದ ನಿರ್ವಂಚಕನ ನೋಡಾ. ತನುವ್ಯಸನ, ಮನವ್ಯಸನ, ಧನವ್ಯಸನ, ರಾಜ್ಯವ್ಯಸನ, ವಿಶ್ವಾವ್ಯಸನ, ಉತ್ಸಾಹವ್ಯಸನ, ಸೇವಕಾವ್ಯಸನವೆಂಬ ಸಪ್ತವ್ಯಸನಂಗಳ ಸಂಹಾರವ ಮಾಡಿದ ನಿರ್ವ್ಯಸನಿಯ ನೋಡಾ. ಷಡೂರ್ಮಿ ಷಡುವರ್ಗಂಗಳ ಹೊಡೆದಪ್ಪಳಿಸಿ ದಶವಾಯುಗಳ ಗಮನಾಗಮನದ ಶಿರವನರಿದ ಶಿವಜ್ಞಾನ ಸಂಪನ್ನನ ನೋಡಾ. ಅಷ್ಟತನುಮೂರ್ತಿಗಳ ಒಳಹೊರಗೆ ತೊಳಗಿ ಬೆಳಗುವ ಸ್ವಯಂಜ್ಯೋತಿ ತಾನಾಗಿ ಅಷ್ಟತನುಮೂರ್ತಿಯ ಮದಂಗಳ ಸುಟ್ಟುರುಹಿ ಒತ್ತಿ ಒರಸಿದ ಉಪಮಾತೀತನ ನೋಡಾ. ಸರ್ವವಿಕಾರಂಗಳ ಗರ್ವಪರ್ವತವ ಮುರಿದು ನಿರ್ವಿಕಾರಿಯಾದ ನಿಶ್ಚಲ ವಿರಕ್ತನ ನೋಡಾ. ಒಳ ಹೊರಗೆಂಬ ಕುಳವಳಿದ ನಿಃಕಳಂಕ ನಿರಾಕುಳನ ನೋಡಾ. ಅರುಹು ಮರಹಳಿದು, ನಿರ್ದೇಹಿಯಾಗಿ ನಿರ್ಮಲಾತ್ಮಕನಾಗಿ ಲಿಂಗವನಪ್ಪಿ ಅಗಲದಿಪ್ಪ ಮಹಾತ್ಮ ಶರಣರಿಂಗೆ ನಮೋ ನಮೋಯೆಂದು ಬದುಕಿದೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.