Index   ವಚನ - 548    Search  
 
ಪಂಚಭೂತಿಕತತ್ವಗಳೆಂಬ ಬ್ರಹ್ಮಾಂಡದೊಳಗೆ ತನುತ್ರಯಂಗಳೆಂಬ ಅಡ್ಡ ಬೆಟ್ಟ. ಗುಣತ್ರಯಗಳೆಂಬ ಘೋರಾರಣ್ಯ. ಜಾಗ್ರ ಸ್ವಪ್ನ ಸುಷುಪ್ತಿಗಳೆಂಬ ತೋಹುಗಳು. ಆಗು ಹೋಗು ಚೇಗೆಗಳೆಂಬ ಕುಳಿ, ತೆವರು. ಪ್ರಕೃತಿತ್ರಯಂಗಳೆಂಬ ಮೃಗ, ಮಲತ್ರಯಂಗಳೆಂಬ ಮೇವ ಮೇದು, ವಿಷಯಗಳೆಂಬ ಜಲವ ಕುಡಿದು, ಪರಿಣಾಮಿಸುತ್ತಿದೆ ನೋಡಾ. ಜೀವವೆಂಬ ಕಾಡಬೇಡನು ತೋಹಿನೊಳಗಣ ಮೃಗದ ಬೇಂಟೆಗೆ ಹೋದರೆ ತೋಹಿನೊಳಗಣ ತಳವಾರರು ಹಿಡಿದೊಯ್ದುದ ಕಂಡು ಬೆರಗಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.