Index   ವಚನ - 547    Search  
 
ಶಿವಭಾವದಿಂದ ಆತ್ಮಹುಟ್ಟಿ ಶಿವ ತಾನೆಂಬುಭಯವನಲಂಕರಿಸಿದನಾಗಿ ಆತ್ಮಂಗೆ ಭಾವವೆಂಬ ಹೆಸರಾಯಿತ್ತು. ಆತ್ಮನು ಆಕಾಶವ ಬಂದು ಕೂಡಿದಲ್ಲಿ ಜ್ಞಾನವೆಂಬ ಹೆಸರಾಯಿತ್ತು. ಆತ್ಮನು ವಾಯುವ ಬಂದು ಬೆರಸಿದಲ್ಲಿ ಮನಸ್ಸೆಂಬ ಹೆಸರಾಯಿತ್ತು. ಆತ್ಮನು ಅಗ್ನಿಯ ಬಂದು ಕೂಡಿದಲ್ಲಿ ಅಹಂಕಾರವೆಂಬ ಹೆಸರಾಯಿತ್ತು. ಆತ್ಮನು ಅಪ್ಪುವ ಬಂದು ಬೆರಸಿದಲ್ಲಿ ಬುದ್ಧಿಯೆಂಬ ಹೆಸರಾಯಿತ್ತು. ಆತ್ಮನು ಪೃಥ್ವಿಯ ಬಂದು ಕೂಡಿದಲ್ಲಿ ಚಿತ್ತ ಪುಟ್ಟಿತ್ತಯ್ಯ. ಚಿತ್ತವಾಚಾರಲಿಂಗವ ಧರಿಸಿಪ್ಪುದು. ಬುದ್ಧಿ ಗುರುಲಿಂಗವ ಧರಿಸಿಪ್ಪುದು. ಅಹಂಕಾರ ಶಿವಲಿಂಗವ ಧರಿಸಿಪ್ಪುದು. ಮನಸ್ಸು ಜಂಗಮಲಿಂಗವ ಧರಿಸಿಪ್ಪುದು. ಜ್ಞಾನ ಪ್ರಸಾದಲಿಂಗವ ಧರಿಸಿಪ್ಪುದು. ಭಾವ ಮಹಾಲಿಂಗವ ಧರಿಸಿಪ್ಪುದಯ್ಯ. ಈ ಭೇದವನರಿದು ಲಿಂಗವ ಧರಿಸಬಲ್ಲರಾಗಿ ನಿಮ್ಮ ಶರಣರು ಸರ್ವಾಂಗಲಿಂಗಿಗಳಯ್ಯ. ಬಸವ, ಪ್ರಭು, ಚೆನ್ನಬಸವಣ್ಣ ಮೊದಲಾದ ವೀರ ಶಿವೈಕ್ಯರ ಬಂಟರಬಂಟನಾಗಿರಿಸಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.