ಕಂಗಳನೋಟ, ಕರಸ್ಥಲದ ಲಿಂಗ ಹೃದಯದ ಜ್ಞಾನ-
ಲಿಂಗವೆಂಬ ಲಿಂಗಮುಖದಲ್ಲಿ ಮಾತನಾಡುತ್ತಿರಲಾಗಿ,
ನಡೆವ ಕಾಲು ಕೆಟ್ಟು, ಹಿಡಿವ ಕೈಯ ಕತ್ತಲೆ ಹರಿದು ಬೆಳಗಾಯಿತ್ತಯ್ಯ.
ನೆನೆವ ಮನದ ಕತ್ತಲೆ ಹರಿದು ಬೆಳಗಾಯಿತ್ತಯ್ಯ.
ನೋಡುವ ಕಂಗಳ ಕತ್ತಲೆ ಹರಿದು ಬೆಳಗಾಯಿತ್ತಯ್ಯ.
ಬೆಳಗಿನೊಳು ಬೆಳಗಾಗಿ, ಬೆಳಗು ಸಮರಸವಾಗಿ,
ಇಂದು ಇಂದುವ ಕೂಡಿದಂತೆ, ರವಿ ರವಿಯ ಬೆರಸಿದಂತೆ,
ಮಿಂಚು ಮಿಂಚನು ಕೂಡಿದಂತೆ, ಉಭಯದ ಸಂಚವಳಿದು
ಸ್ವಯಂ ಜ್ಯೋತಿಯಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.