Index   ವಚನ - 593    Search  
 
ತಾಳಮರದ ಮೇಲೊಂದು ಹೂಳಿದ್ದ ವಸ್ತುವ ಕಂಡೆ. ಏಳುನೂರೆಪ್ಪತ್ತು ಮನೆಯಲ್ಲಿ ತಾನಾಗಿಪ್ಪುದಯ್ಯ. ಸರ್ವ ಸಂದುಗಳೊಳಗೆ ಅಳವಟ್ಟು ಬೆಳಗುವುದು. ನಟ್ಟ ನಡು ಮಧ್ಯದಲ್ಲಿ ನಂದಾದೀವಿಗೆ ನಂದದ ಬೆಳಗು ಕುಂದದು ನೋಡಿರೇ. ಮೂರಾರು ನೆಲೆಗಳ ಮೀರಿ ಪರಿಪೂರ್ಣವಾಗಿಪ್ಪುದು. ದಶನಾಡಿಗಳೊಳಗೆ ಎಸೆದು ಪಸರಿಸಿಪ್ಪ ಸ್ಫಟಿಕಪ್ರದ್ಯುತ್ ಪ್ರಭಾಮಯವಾಯಿತ್ತಯ್ಯ. ಒಳಗಿಲ್ಲ, ಹೊರಗಿಲ್ಲ, ಎಡನಿಲ್ಲ, ಬಲನಿಲ್ಲ, ಹಿಂದಿಲ್ಲ, ಮುಂದಿಲ್ಲ, ಅಡಿಯಿಲ್ಲ, ಅಂತರವಿಲ್ಲ, ಆಕಾಶವೆಂಬುದು ಮುನ್ನಿಲ್ಲವಯ್ಯ. ಹಿಡಿದರೆ ಹಿಡಿಯಿಲ್ಲ, ಕರೆದರೆ ನುಡಿಯಿಲ್ಲ, ನೋಟಕ್ಕೆ ನಿಲುಕದು. ಇದರಾಟ ಅಗಮ್ಯವಾಗಿಪ್ಪುದು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.