Index   ವಚನ - 649    Search  
 
ಎಡದ ಕೈಯಲ್ಲಿ ಲಿಂಗವ ಹಿಡಿದುಕೊಂಡು, ಬಲದ ಕೈಯಲ್ಲಿ ಮುದ್ದೆಯ ಮಾಡಿ, ಉಣ್ಣು ಉಣ್ಣೆಂದು ಊಡಿಸಿದರೆ ಒಲ್ಲದು ಕಾಣಿರಯ್ಯ. ದೇವರುಂಡಿತೆಂದು ಬಿಗಿಬಿಗಿದು ಕಟ್ಟಿಕೊಂಬರಯ್ಯ. ದೇವರಿಗೆ ಹಿಪ್ಪೆಯ ತೋರಿ, ರಸವ ನೀವು ಉಂಡು, ದೇವರನೇಕೆ ದೂರುವಿರಯ್ಯ? ದೇವರು ಹೀಂಗೆ ಒಲ್ಲದು.ಉಂಬ ಕ್ರಮವ ಹೇಳಿಹೆ ಕೇಳಿರಯ್ಯ. ಇಷ್ಟಲಿಂಗಕ್ಕೆ ರೂಪ ಕೊಟ್ಟಲ್ಲಿ, ನೋಡಿ ಪರಿಣಾಮಿಸುವದಲ್ಲದೆ ಸವಿದು ಪರಿಣಾಮಿಸುವುದಲ್ಲ. ಸವಿದು ಪರಿಣಾಮಿಸುವುದೆಲ್ಲಿಯೆಂದರೆ; ಜಿಹ್ವೆಯ ಕೊನೆಯ ಮೊನೆಯಲ್ಲಿ ತಟ್ಟುವ ಮುಟ್ಟುವ ಷಡುರಸ್ನಾನದ ರುಚಿಯ ತಾನೆನ್ನದೆ ಲಿಂಗವೇ ಸ್ವೀಕರಿಸುತ್ತದೆಯೆಂಬ ನಿಶ್ಚಯವುಳ್ಳರೆ ಸವಿದು ಪರಿಣಾಮಿಸುವದಯ್ಯ. ನಾಸಿಕದ ಕೊನೆಯ ಮೊನೆಯಲ್ಲಿ ವಾಸಿಸುವ ಷಡ್ವಿಧಗಂಧಂಗಳ ಭೋಗವನರಿದು ಭೋಗಿಸುವದು ಲಿಂಗ ತಾನೆ. ನೇತ್ರದ ಕೊನೆಯ ಮೊನೆಯಲ್ಲಿ ತಟ್ಟುವ ಷಡ್ವಿಧರೂಪಿನ ಭೋಗಂಗಳ ಭೋಗಿಸಿ ಸುಖಿಸುವುದು ಲಿಂಗ ತಾನೆ, ನೋಡಾ. ತ್ವಕ್ಕಿನ ಕೊನೆಯ ಮೊನೆಯಲ್ಲಿ ಸೋಂಕುವ ಷಡ್ವಿಧ ಸ್ಪರ್ಶನದ ಭೋಗಂಗಳ ಭೋಗಿಸಿ ಸುಖಿಸುವದು ಲಿಂಗ ತಾನೆ, ನೋಡಾ. ಶ್ರೋತ್ರದ ಕೊನೆಯ ಮೊನೆಯಲ್ಲಿ ತಟ್ಟುವ ಷಡ್ವಿಧ ಶಬ್ದಂಗಳ ಭೋಗಾದಿಭೋಗಂಗಳ ಭೋಗಿಸಿ ಸುಖಿಸಿ ಪರಿಣಾಮಿಸುವದು ಲಿಂಗ ತಾನೆ ನೋಡಾ. ಭಾವದ ಕೊನೆಯ ಮೊನೆಯಲ್ಲಿ ತೀವಿ ಪರಿಪೂರ್ಣವಾಗಿರ್ಪ ಷಡ್ವಿಧತೃಪ್ತಿಯ ಭೋಗಾದಿಭೋಗಂಗಳ ಭೋಗಿಸಿ ಸುಖಿಸಿ, ಪರಿಣಾಮಿಸುವಾತನು ಲಿಂಗದೇವನೆಂದರಿದು, ಸರ್ವೆಂದ್ರಿಯಮುಖದಲ್ಲಿ ಬಂದ ಸರ್ವತೋಮುಖ ಪದಾರ್ಥವ, ಸರ್ವತೋಮುಖಲಿಂಗಕ್ಕೆ ಅರ್ಪಿಸಿ, ಸರ್ವಾಂಗವೆಲ್ಲವು ಬಾಯಾಗಿ, ಸರ್ವತೋಮುಖಪ್ರಸಾದವ ಕೊಂಡು, ಆ ಸರ್ವಜ್ಞಪ್ರಸಾದದೊಳಡಗಿದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.