Index   ವಚನ - 650    Search  
 
ಗರ್ಭದೊಳಗಣ ಶಿಶುವಿಂಗೆ ತಾಯಿ ಉಂಡಲ್ಲಿಯೆ ಪರಿಣಾಮವಲ್ಲದೆ, ಬೇರೊಂದೆಡೆ ಮಾಡಿ ಉಣ್ಣೆಂದರೆ ಉಣ್ಣಬಲ್ಲುದೇ ಅಯ್ಯ? ಪ್ರಾಣದೊಳಗೆ ಪ್ರಾಣವಾಗಿಪ್ಪ ಲಿಂಗಕ್ಕೆ, ಆ ಶರಣನುಂಡಲ್ಲಿಯೆ ತೃಪ್ತಿಯಲ್ಲದೆ, ಬೇರೆ ಊಡಿಸಿದರೆ ಉಣಬಲ್ಲುದೇ ಅಯ್ಯ? ಸಂಯೋಗ ವಿಯೋಂಗಗಳಲ್ಲಿ, ತಟ್ಟುವ ಮುಟ್ಟುವ, ಅಣುಬಿಂದು ಸುಖಾರ್ಥವನು, ಅರಿವವನು, ಅರ್ಪಿಸುವವನು, ಭೋಗಿಸುವವನು, ನೀನೆಯಲ್ಲದೆ, ನಾ(ನ)ಲ್ಲ ನೋಡಾ. ಲಿಂಗದೊಳಗಿರ್ದು, ಲಿಂಗಕ್ಕೆ ಲಿಂಗವನರ್ಪಿಸಿ, ಲಿಂಗಪ್ರಸಾದದೊಳಗೆ, ಒಡಗೂಡಿ ಮಹಾಪ್ರಸಾದಿಯಾಗಿ, ಮಹಕ್ಕೆ ಮಹವಾಗಿ, ಪರಕ್ಕೆ ಪರವಾಗಿ, ಸಾವಧಾನ ಪ್ರಸಾದಿಯಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.