ಆಜ್ಞಾಕರ್ತೃವಿನ ಅಂಗನೆಗೆ
ಮೋಹದ ಮಗಳು ಹುಟ್ಟಿದಳು ನೋಡಾ.
ಆಕೆಯ ವಿಲಾಸದಿಂದ ಲೋಕಾದಿಲೋಕಂಗಳೆಲ್ಲ
ಉದಯಿಸಿದವು ನೋಡಾ.
ಆಯಾಕೆ ನಿಂದಲ್ಲೆ ಪ್ರಳಯವಾಗುತ್ತಿಪ್ಪವು ನೋಡಾ.
ಆ ಲೋಕ ಲೌಕಿಕವನತಿಗಳೆದು,
ಆಕೆಯ ಸಂಗಕ್ಕೆ ಹೊರಗಾದಾತನೇ,
ಏಕಮೇವಾ ನ ದ್ವಿತೀಯ ಪರಬ್ರಹ್ಮವು.
ತಾನು ತಾನಾದ ಪ್ರಾಣಲಿಂಗೈಕ್ಯನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.