Index   ವಚನ - 52    Search  
 
ತನ್ನ ತಂದುಕೊಟ್ಟ ಚನ್ನಗುರುಲಿಂಗವ ಭಿನ್ನವಿರಹಿತನಾಗಿ ಮುನ್ನ ಕರದಲ್ಲಿಟ್ಟು ಹೃದಯಕಾಸಾರದುದಕ ಮಜ್ಜನಗೈದು, ಅಷ್ಟದಳಕುಸುಮವನಿಟ್ಟು ಶರಣೆಂದು ಮಾಡುವೆನು. ಕರಸ್ಥಲದ ಲಿಂಗವ ಮನಸ್ಥಲದಲ್ಲಿ ಧರಿಸಿ, ಉನ್ಮನಸೋದಕದಿ ಮಜ್ಜನಕ್ಕೆರೆದು ತ್ರಿದಳಕುಸುಮವನಿಟ್ಟು ಶರಣೆಂದು ಮಾಡುವೆನು. ಮನಸ್ಥಲದ ಲಿಂಗವನು ಭಾವಸ್ಥಲದಲ್ಲಿ ಧರಿಸಿ, ಚಿಜ್ಜಲದಿಂ ಮಜ್ಜನಕ್ಕೆರೆದು ಸಾಸಿರದಳಕುಸುಮವನಿಟ್ಟು ಶರಣೆಂದು ಮಾಡುವೆನು. ಭಾವಸ್ಥಲದ ಲಿಂಗವನು ಸರ್ವಾಂಗದಲ್ಲಿರಿಸಿ ಸತ್ಯೋದಕದಿಂ ಮಜ್ಜನಕ್ಕೆರೆದು, ಪಶ್ಚಿಮಕೋಣೆಯಲ್ಲಿಪ್ಪ ನಿಶ್ಚಿಲಕುಸುಮವನಿಟ್ಟು ಶರಣು ಶರಣೆಂದು ಬದುಕಿದೆನು ನಿರಂಜನ ಚನ್ನಬಸವಲಿಂಗವನು.