Index   ವಚನ - 218    Search  
 
ವೀರಮಾಹೇಶ್ವರರುಗಳೆಂಬ ಪೋರಜಂಗುಳಿಗಳನೇನೆಂಬೆನಯ್ಯಾ? ಮಣ್ಣವಿಡಿದು ಬಣ್ಣಗೆಟ್ಟು ಬರಿಯ ಬಸಿರ ಹೊರೆಯಲಿಕ್ಕೆಂದು, ಕಾಸು ವಿಷಯಾದಿ ಗೃಹ ಕ್ಷೇತ್ರಕ್ಕೆ ಮೆಚ್ಚಿ ಗುರುಹಿರಿಯನರಿಯದೆ ಹೋರಾಡಿ ಹೊಲಬುಗೆಟ್ಟು ಹೋಗುವ ಮಲಬದ್ಧ ಮೂಢರು ವೀರಮಾಹೇಶ್ವರರಪ್ಪರೆ? ಕನ್ಯೆಯರೊಲವಿಂಗೆ ಕಲೆತು ಮನ್ನಣೆಮರ್ಯಾದೆಗಳ ಹರಿದು, ಚುನ್ನಾಟದ ಕುನ್ನಿಗಳಂತೆ ಬೆನ್ನುಹತ್ತಿ ತಿರುಗುವ ಶುನಿಸಂಬಂಧಿಗಳನೆಂತು ಮಾಹೇಶ್ವರರೆಂಬೆನಯ್ಯಾ? ಹೊನ್ನ ಹಿಡಿದು ಅನ್ಯರಿಗೆ ಬಡ್ಡಿಯ ಕೊಟ್ಟು, ಬಂಧನವ ಮಾಡಿ ತಂದು ಕೂಡಹಾಕಿ, ಬಂದ ಜಂಗಮಕ್ಕೊಂದು ಕಾಸನೀಯದೆ ಬೆಂದವೊಡಲಿಗೆ ಸಂದಿಸದೆ, ಹಂದಿ ನಾಯಿಯಂತೆ ಸಾವ, ಹೆಂದ ಮೂಢರು ಮಾಹೇಶ್ವರರಪ್ಪರೆ? ಇಂತು ತ್ರಿವಿಧದೊಳಗಿರ್ದ ತ್ರಿವಿಧವನರಿಯದ ತ್ರಿವಿಧ ಮಲಭುಂಜಕರನೆಂತು ಮಾಹೇಶ್ವರರೆಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ?