Index   ವಚನ - 297    Search  
 
ಅಯ್ಯಾ, ಎನ್ನಲ್ಲಿ ಅರುಹಿನ ಮುಖವನರಿದೆನಾಗಿ ಕುಲಮದವಳಿದುಳಿದು ಬಂದಿತ್ತು. ಅಯ್ಯಾ, ಎನ್ನಲ್ಲಿ ಪ್ರಾಣನ ಮುಖವನರಿದೆನಾಗಿ ಛಲಮದವಳಿದುಳಿದು ಬಂದಿತ್ತು. ಅಯ್ಯಾ, ಎನ್ನಲ್ಲಿ ಜ್ಞಾನಮುಖವನರಿದೆನಾಗಿ ಧನಮದವಳಿದುಳಿದು ಬಂದಿತ್ತು. ಅಯ್ಯಾ, ಎನ್ನಲ್ಲಿ ನೇತ್ರಮುಖವನರಿದೆನಾಗಿ ರೂಪಮದವಳಿದುಳಿದು ಬಂದಿತ್ತು. ಅಯ್ಯಾ, ಎನ್ನಲ್ಲಿ ಅಂಗಮುಖವನರಿದೆನಾಗಿ ಯವ್ವನಮದವಳಿದುಳಿದು ಬಂದಿತ್ತು. ಅಯ್ಯಾ, ಎನ್ನಲ್ಲಿ ಜಿಹ್ವೆಮುಖವನರಿದೆನಾಗಿ ವಿದ್ಯಾಮದವಳಿದುಳಿದು ಬಂದಿತ್ತು. ಅಯ್ಯಾ, ಎನ್ನಲ್ಲಿ ಶ್ರೋತ್ರಮುಖವನರಿದೆನಾಗಿ ರಾಜಮದವಳಿದುಳಿದು ಬಂದಿತ್ತು. ಅಯ್ಯಾ, ಎನ್ನಲ್ಲಿ ಘ್ರಾಣಮುಖವನರಿದೆನಾಗಿ ತಪಮದವಳಿದುಳಿದು ಬಂದಿತ್ತು. ಇಂತು ಅಷ್ಟಸ್ಥಲವನರಿದೆನಾಗಿ ಅಷ್ಟಮದವಳಿದುಳಿದು ಬಂದಿತ್ತು. ಅಷ್ಟಾವರಣವಾಗಿ ಉಳಿದು ಎನ್ನ ವಿರಳಕ್ರಿಯಾಜ್ಞಾನಕ್ಕೆ ಆಸ್ಪದವಾಯಿತ್ತು ಗುರುನಿರಂಜನ ಚನ್ನಬಸವಲಿಂಗದಲ್ಲಿ.