Index   ವಚನ - 331    Search  
 
ಕರಸ್ಥಲ ಲಿಂಗ, ಮನಸ್ಥಲ ಮಂತ್ರ, ಪ್ರಾಣಸ್ಥಲ ಪ್ರಸಾದ, ಭಾವಸ್ಥಲ ಪರಮಪಾದೋದಕವಾದ ಮಾಹೇಶ್ವರನು ನಡೆವಲ್ಲಿ ಶುದ್ಧ, ನುಡಿವಲ್ಲಿ ಸಿದ್ಧ, ಕೂಡುವಲ್ಲಿ ಪ್ರಸಿದ್ಧ. ಅದಲ್ಲದೆ ವೇಷಧಾರಿ ಗುರುವಿನ ಕೈಯ ಲಿಂಗವ ಅಂಗದ ಮೇಲೆ ಧರಿಸಿ ನಡೆವ, ಕಂಗುರುಡ ಕಸಮಲಮನುಜರನೇನೆಂಬೆನಯ್ಯಾ? ಆಸೆಯ ಇಚ್ಚೆಗೆ ಆವ ಕುಲದವನಾದರು ಅವನ ಓಲೈಸುವರು ಶರಣೆಂದು ಗುರುದ್ರೋಹಿಗಳು. ವಿಷಯದಿಚ್ಛೆಗೆ ಆವ ಕುಲದ ಸ್ತ್ರೀಯಾದರು ಅವಳ ಅಧೋದ್ವಾರದಲ್ಲಿ ಮುಳುಗುವರು ಲಿಂಗದ್ರೋಹಿಗಳು. ಹಸಿವಿನಿಚ್ಛೆಗೆ ಶುಚಿಯಶುಚಿಯೆನ್ನದೆ ಭವಿ ಭಕ್ತನೆನ್ನದೆ ಕಂಡ ಕಂಡ ಜನರ ಕೊಂಡಾಡಿ ಉದರ ಹೊರೆವರು ಜಂಗಮದ್ರೋಹಿಗಳು. ಇಂತು ತ್ರಿವಿಧ ದ್ರೋಹಿಗಳಿಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕಪ್ರಸಾದವಿಲ್ಲ ಮುಕ್ತಿಯೆಂಬುದು ಎಂದೆಂದಿಗೂ ಇಲ್ಲ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.