Index   ವಚನ - 520    Search  
 
ನೀಲಲೋಚನೆಯಮ್ಮನ ಗರ್ಭದಿಂದುದಯವಾಗಿ ಬಂದವ ನಾನೆಂದು ಬಸವಣ್ಣನ ಮನೆಗೆ ಶರಣೆನ್ನಹೋದರೆ ಮಡಿವಾಳತಂದೆ, ಚನ್ನಬಸವಣ್ಣ, ಸಿದ್ಧರಾಮದೇವರು, ಪ್ರಭುಸ್ವಾಮಿ, ಅಜಗಣ್ಣಯ್ಯಗಳು ಸಹವಾಗಿ ಬಸವಣ್ಣನ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು. ಮಡಿವಾಳತಂದೆಯ ಮನೆಗೆ ಶರಣೆನ್ನ ಹೋದರೆ ಚನ್ನಬಸವಣ್ಣ, ಸಿದ್ಧರಾಮಯ್ಯ, ಪ್ರಭುದೇವರು, ಅಜಗಣ್ಣ ತಂದೆ, ಬಸವಣ್ಣ ಸಹವಾಗಿ ಮಡಿವಾಳ ತಂದೆಯ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು. ಚನ್ನಬಸವಣ್ಣನ ಮನೆಗೆ ಶರಣೆನ್ನಹೋದರೆ ಸಿದ್ಧರಾಮಯ್ಯತಂದೆ, ಪ್ರಭುದೇವರು, ಅಜಗಣ್ಣಯ್ಯಗಳು, ಬಸವರಾಜದೇವರು, ಮಡಿವಾಳಯ್ಯಗಳು ಸಹವಾಗಿ ಚನ್ನಬಸವಣ್ಣನ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು. ಸಿದ್ಧರಾಮಯ್ಯನ ಮನೆಗೆ ಶರಣೆನ್ನಹೋದರೆ ಪ್ರಭುದೇವ, ಅಜಗಣ್ಣಯ್ಯಗಳು, ಬಸವಣ್ಣ, ಮಡಿವಾಳಯ್ಯ, ಚನ್ನಬಸವಣ್ಣನವರು ಸಹವಾಗಿ ಸಿದ್ಧರಾಮಯ್ಯನ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು. ಪ್ರಭುವಿನ ಸ್ಥಲಕ್ಕೆ ಶರಣೆನ್ನಹೋದರೆ ಅಜಗಣ್ಣ, ಬಸವಣ್ಣ, ಮಡಿವಾಳ, ಚನ್ನಬಸವಣ್ಣ, ಸಿದ್ಧರಾಮಯ್ಯಗಳು ಸಹವಾಗಿ ಪ್ರಭುವಿನ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು. ಅಜಗಣ್ಣಯ್ಯನ ಮನೆಗೆ ಶರಣೆನ್ನಹೋದರೆ ಬಸವರಾಜ, ಮಡಿವಾಳತಂದೆ, ಚನ್ನಬಸವಣ್ಣ, ಸಿದ್ಧರಾಮ, ಪ್ರಭುದೇವರು ಸಹವಾಗಿ ಅಜಗಣ್ಣಯ್ಯಗಳ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು. ಇಂತು ಬಲ್ಲಂತೆ ಕಂಡು ಶರಣೆಂದು ಸುಖಿಯಾದೆನು ಗುರುನಿರಂಜನ ಚನ್ನಬಸವಲಿಂಗದಲ್ಲಿ.