Index   ವಚನ - 538    Search  
 
ಅನಾದಿಸಂಸಿದ್ಧ ನಿರಂಜನ ಪ್ರಾಣಲಿಂಗಿಯ ಘನವನೇನೆಂದುಪಮಿಸುವೆನಯ್ಯಾ! ಚಿತ್ಕಾಯದಲ್ಲೆಸೆವ ಸುಚಿತ್ತ ಸುಬುದ್ಧಿಯೆಂಬ ಹಸ್ತದಲ್ಲಿ ಪಿಡಿದರ್ಚಿಸಿಕೊಂಬ ಸದ್ರೂಪಸ್ವರೂವಾದ ಇಷ್ಟಮಹಾಲಿಂಗವನು. ಉನ್ಮಾನಸದಲ್ಲೊಪ್ಪುವ ನಿರಹಂಕಾರಸುಮನವೆಂಬ ಹಸ್ತದಲ್ಲಿ ಪಿಡಿದರ್ಚಿಸಿಕೊಂಬ ಚಿದ್ರೂಪಸ್ವರೂಪವಾದ ಪ್ರಾಣಲಿಂಗವನು. ಅನುಭಾವದಲ್ಲೊಪ್ಪುವ ಸುಜ್ಞಾನಸದ್ಭಾವವೆಂಬ ಹಸ್ತದಲ್ಲಿ ಪಿಡಿದು ಅರ್ಚಿಸಿಕೊಂಬ ಆನಂದಸ್ವರೂಪವಾದ ಭಾವಲಿಂಗವನು. ಇಂತು ಕಾಯ ಮನ ಭಾವದಲ್ಲಿ ಪರಿಪೂರ್ಣಪೂಜೆ ಅಳವಡಿಸಿಕೊಂಡು ಸುಖಮಯನಾದಲ್ಲಿ ನೇಮ ಸೀಮೆ ಖಂಡಿತಕ್ರಿಯಂಗಳೆಲ್ಲ ಕರಗಿ ಅಖಂಡಮಯವಾಗಿ ಅನುಪಮ ಬೆಳಗಿನೊಳೊಪ್ಪುತಿರ್ದನು ಗುರುನಿರಂಜನ ಚನ್ನಬಸವಲಿಂಗದಲ್ಲಿ.