Index   ವಚನ - 547    Search  
 
ಗುರುವರನಿಂದುದಿಸಿ, ಜಂಗಮಪಾದೋದಕಪ್ರಸಾದದಿಂದೆ ಬೆಳೆದು, ಪರಮಲಿಂಗೈಕ್ಯವು ನಮಗುಂಟೆಂದು ನುಡಿವ ನಾಲಿಗೆ ನೀಟಾಗಿಹುದು; ಗುರುವಿಗಿತ್ತ ತನುವು ನೀಟಾಗಿಹುದು. ಲಿಂಗದ ಮನ ಚೆಲುವಾಗಿಹುದು. ಜಂಗಮದ ಧನ ಸ್ವಚ್ಛವಾಗಿಹುದು. ಆಡಿರ್ದಂತೆ ಆಚರಿಸಿ ಅರ್ಪಿತವಾಗಲರಿಯದೆ ನಾಲಿಗೆ ಮರಳಿದರೆ ಕೀಳರೆ? ತನು ವಂಚಿಸಿ ಬಿದ್ದರೆ ದುರ್ಗತಿಗೆ ಎಳೆದುಹಾಕರೆ? ಮನಸ್ಸು ಮರಳಿ ಬಿದ್ದರೆ ನಾಚಿಕೆಯ ಕೊಳ್ಳರೆ? ದ್ರವ್ಯವ ಮರಳಿ ಸುಖಿಸಿದರೆ ವೈತರಣಿಯೊಳು ದುಃಖಬಡಿಸರೆ? ಇದು ಕಾರಣ ನಿಮ್ಮ ನಡತೆ ಯಮನಿಗೆ ಹಿಡಿತ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.