ಅತ್ಯತಿಷ್ಟರ್ದಶಾಂಗುಲವೆಂಬ ಅನುಪಮಲಿಂಗವನು
ಸಗುಣಸದ್ಗುರುವಿನಿಂದ ಪಡೆದು,
ಅಂಗ ಮನ ಭಾವಂಗಳಲ್ಲಿ ಹೆರೆಹಿಂಗದಾಚರಿಸುವ
ಪರಮಾನಂದ ಶರಣರ ನೆರೆಯಲ್ಲಿರ್ದ ನರರೆಲ್ಲ
ಪರಿಭವಂಗಳ ನೀಗುವರಯ್ಯಾ.
ಅವರ ನುಡಿಯ ಕೇಳಿ ನಡೆದವರು ಪರಮಸುಖದೊಳಗಿರ್ಪರಯ್ಯಾ.
ಅವರ ಸೇವೆಯಮಾಡಿ ಒಲಿಸಿಕೊಂಡವರು ಸದ್ಯೋನ್ಮಕ್ತರಯ್ಯಾ.
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಶರಣರ ದರ್ಶನ ಸ್ಪರ್ಶನ ಸಂಭಾಷಣೆಯೇ
ನಿಜಪದವಯ್ಯಾ.