Index   ವಚನ - 688    Search  
 
ಅಯ್ಯಾ, ನಿನ್ನನೊಂದುಮುಖದಲ್ಲಿ ಅರ್ಚಿಸುವೆನೆ? ಎನ್ನ ಶ್ರದ್ಧೆ ಆನಂದಭಕ್ತಿಯೊಳೊಡವೆರೆದುದಾಗಿ ಭಕ್ತಿಸ್ಥಲವೆನಗಿಲ್ಲವಯ್ಯಾ. ಮತ್ತೊಂದುಮುಖದಲ್ಲರ್ಚಿಸುವೆನೆ? ಎನ್ನ ನಿಷ್ಠೆ ಆನಂದಭಕ್ತಿಯೊಳೊಡವೆರೆದುದಾಗಿ ಮಹೇಶ್ವರಸ್ಥಲವೆನಗಿಲ್ಲವಯ್ಯಾ. ಮತ್ತೊಂದುಮುಖದಲ್ಲರ್ಚಿಸುವೆನೆ? ಎನ್ನ ಸಾವಧಾನ ಆನಂದಭಕ್ತಿಯೊಳೊಡವೆರೆದುದಾಗಿ ಪ್ರಸಾದಿಸ್ಥಲವೆನಗಿಲ್ಲವಯ್ಯಾ. ಮತ್ತೊಂದುಮುಖದಲ್ಲರ್ಚಿಸುವೆನೆ? ಎನ್ನ ಅನುಭಾವ ಆನಂದಭಕ್ತಿಯೊಳೊಡವೆರೆದುದಾಗಿ ಪ್ರಾಣಲಿಂಗಿಸ್ಥಲವೆನಗಿಲ್ಲವಯ್ಯಾ. ಮತ್ತೊಂದುಮುಖದಲ್ಲರ್ಚಿಸುವೆನೆ? ಎನ್ನ ಸಮರಸ ಆನಂದಭಕ್ತಿಯೊಳೊಡವೆರೆದುದಾಗಿ, ಐಕ್ಯಸ್ಥಲವೆನಗಿಲ್ಲವಯ್ಯಾ. ಗುರುನಿರಂಜನ ಚನ್ನಬಸವಲಿಂಗವನು ಆಯಾಯಮುಖದಲ್ಲಿ ಎನ್ನ ಆನಂದದೊಳೊಡವೆರೆದು ಅರ್ಚಿಸಿ ಪರಮಸುಖಿಯಾಗಿದ್ದೆನಯ್ಯಾ.