ಜ್ಞಾನವನಂತರಂಗಕಿತ್ತು, ಕ್ರೀಯವ ಬಹಿರಂಗಕಿತ್ತು,
ಸರ್ವಾಚಾರಸಂಪತ್ತಿನೊಳಗಿರಿಸಿದ
ಕ್ರಿಯಾಘನಗುರುವಿನ ತೆಗೆದುಹಾಕಿ
ನಾವು ಲಿಂಗಜಂಗಮಸನ್ನಿಹಿತರೆಂದಡೆ
ಆ ನಾಲಿಗೆ ಕೀಳದಿಹರೆ ಕಾಲನವರು?
ಆ ಮಹಾಗುರುವಿನ ಸದ್ಭಾವಲಿಂಗವನರ್ಚಿಸುವಲ್ಲಿ
ಖಂಡಿಸದಿಹರೆಯಮನವರು?
ಆ ಗುರುಜ್ಞಾನ ಭಸಿತವನು ಧರಿಸಿದಲ್ಲಿ ಚರ್ಮವ ಹೆರಜಿ
ಬಿಸಾಟರೆ ಅಂತಕನವರು?
ಆ ಗುರುಕಟಾಕ್ಷಮಣಿಯ ಧರಿಸಿದಲ್ಲಿ
ಕಡಿಕಡಿದು ಕಡೆಗಿಡರೆ ಯಮನವರು?
ಆ ಆದಿಯ ಗುರುನಾಮಾಮೃತವ
ಸೇವಿಸುವರ ಹೃದಯವನಿರಿದು
ಕೆಡಹದಿಹರೆ ದಂಡಧರನವರು?
ಆ ಅವಿರಳ ಗುರುವಿನ ಪರಮಾನಂದ ಪಾದೋದಕವ ಕೊಂಬ
ಮಾನವರ ಬಾಧಿಸರೆ ಕೀನಾಶನವರು?
ಆ ಮಹಾಜ್ಞಾನಿ ಗುರುವಿನ ಮಹದಾನಂದಪ್ರಸಾದವ
ಸೇವಿಸುವ ಭಾವವನು
ಶೋಕಾಗ್ನಿಯಿಂದೆ ನೋಯಿಸದಿಹರೆ ನಿರಯಪತಿಯವರು?
ಇದು ಕಾರಣ ಗುರುವ ಜರಿದು ನೆರೆದು ಮಾಡುವ ಮಾಟವೆಲ್ಲ
ವೈತರಣಿಯಕೂಟ
ಇದಕ್ಕೆ ನೀವೇ ಸಾಕ್ಷಿ ಗುರುನಿರಂಜನ ಚನ್ನಬಸವಲಿಂಗಾ.