Index   ವಚನ - 978    Search  
 
ಕೋಪ ಮರವೆಗಳಿಂದೊಗೆದ ಕುರುಹಿಂಗೆ ಬಾಹ್ಯಬಾಧೆಯನು ತೊಡೆದವರುಂಟು. ಲೋಕದೊಳಗೆ ಜನನಸಂಗಬಾಧೆಯನು ತೊಡೆದವರಾರು ಹೇಳಾ? ಮೋಹ ಮರವೆಗಳಿಂದೊಗೆದ ಕುರುಹಿಂಗೆ ಬಾಹ್ಯಬಾಧೆಯನು ತೊಡೆದವರುಂಟು; ಇಳೆಯೊಳಗೆ ತಾಪಸ್ಥಿತಿಸಂಗಬಾಧೆಯನು ತೊಡೆದವರಾರು ಹೇಳಾ? ಮರವೆಗಳಿಂದೊಗೆದ ಕುರುಹಿಂಗೆ ಬಾಹ್ಯಬಾಧೆಯನು ತೊಡೆದವರುಂಟು; ಜಗದೊಳಗೆ ಮರಣಸಂಗಬಾಧೆಯನು ತೊಡೆದವರಾರು ಹೇಳಾ? ಅಶನವ್ಯಸನವಿತ್ತುಗಳಿಂದೆ ಹಿರಿಯರೆನಿಸಬಹುದು, ಲೋಕದೊಳಗೆ ಕ್ರಿಯಾಜ್ಞಾನೈಶ್ವರ್ಯಗಳಿಂದೆ ಹಿರಿಯರೆನಿಸುವರಾರು ಹೇಳಾ, ಗುರುನಿರಂಜನ ಚನ್ನಬಸವಲಿಂಗವೆಂಬ ಸದ್ಗುರುನಾಥನಲ್ಲದೆ.