Index   ವಚನ - 980    Search  
 
ಅರಿದು ಒಂದಾದ ಶರಣಂಗೆ ಹಿರಿದು ಕಿರಿದೆಂದು ಹರಿದು ಹಾಕಿದರೆ ಒಂದನೆಯ ಪಾತಕ. ತನುಮನ ಧನವೆಲ್ಲವನೊಪ್ಪಿಸಿ ಅನುವಿಡಿದಾಚರಿಸುವ ಸನುಮತಕ್ಕೆ ವಿಮುಖರಾದರೆ ಎರಡನೆಯ ಪಾತಕ. ಆ ಗುರುವರನ ಕರಮನಭಾವದಲ್ಲಿರಿಸಿ ಮೆರೆವ ಮಹಾಂತಗತಿಯುಳ್ಳ ಮಹಿಮಂಗೆ ಉದರಾಗ್ನಿವೆರೆದು ಒಂದು ವಿಷಯಕೆ ಜರಿದರೆ ಮೂರನೆಯ ಪಾತಕ. ನಿಜಗುರುವಾಗ್ನೆ ನೆಲೆಗೊಂಡು ಹುಸಿಮಾತುಮಥನವ ಮರೆದಿರುವ ಘನತೆಯನು ಬಿನುಗುಕೋಟಲೆಗೆಳಸಿ ಕಾಡುವುದು ನಾಲ್ಕನೆಯ ಪಾತಕ. ತಾನಿಲ್ಲದೆ ಮಾಡುವ ಕುರುಹಿನ ತನುಮನಪ್ರಾಣವ ಘಾಸಿಮಾಡಿ ಧನದಾಸೆಯಲ್ಲಿ ಮುಳುಗಿ ಸೆಳೆಸೆಳೆದು ನೋಯಿಸುವುದು ಐದನೆಯ ಪಾತಕ. ಇಂತೀ ಪಂಚಮಹಾಪಾತಕ ಪ್ರಾಣಿಗೆ ದೊರೆನರಕವಲ್ಲದೆ, ಗುರುತನ ಸಲ್ಲದು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.