Index   ವಚನ - 13    Search  
 
ಜಂಗಮ ಜಂಗಮವೆಂಬ ನುಡಿಗೆ ನಾಚರು ನೋಡಯ್ಯ. ಜಂಗಮ ಮಲತ್ರಯ ಈಷಣತ್ರಯ ಪಾಶತ್ರಯ ತನುತ್ರಯ ಜೀವತ್ರಯ ಅವಸ್ಥಾತ್ರಯ ಗುಣತ್ರಯವಿರಹಿತ ನೋಡಯ್ಯ. ಜಂಗಮ ಧರ್ಮಾರ್ಥಕಾಮಮೋಕ್ಷ ಸಾಲೋಕ್ಯ ಸಾಮೀಪ್ಯ ಸಾರೋಪ್ಯ ಸಾಯುಜ್ಯವೆಂಬ ಜಡಕರ್ಮವಿರಹಿತ ನೋಡಯ್ಯ. ಜಂಗಮ ಜನನಮರಣವಿರಹಿತನಂದೆಂತೆಂದಡೆ: ಜಕಾರಂ ಜನನಂ ದೂರಂ ಗಕಾರಂ ಗಮನವರ್ಜಿತಃ | ಮಕಾರಂ ಮರಣಂ ನಾಸ್ತಿತ್ರಿವರ್ಣಮಭಿಧೀಯತೇ || ಆದ್ಯಂತರಹಿತಂ ಶೂನ್ಯಂ ಸರ್ವಾನಂದಮಯಂ ವಿಭುಃ| ಅನಾದಿ ಜಂಗಮೋ ದೇವಿ ಬ್ರಹ್ಮವಿಷ್ಣ್ವೇಂದ್ರ ಪೂಜಿತಃ|| ಲೋಷ್ಠಹೇಮ ಸಮಾನಶ್ಚಯೋ ಹಿತಾಹಿತಯೋ ಸಮಃ| ಸಂತುಷ್ಟಶ್ಚಾಪಮಾನೇಷು ಸ್ವತತ್ರಂ ಜಂಗಮಸ್ಥಲಂ || ಎಂದುದಾಗಿ, ಆದ್ಯಂತರಹಿತ ಸ್ವತಂತ್ರ ಘನಮಹಿಮ ನೋಡಯ್ಯ. ಜಂಗಮ ಸಚ್ಚಿದಾನಂದ ನಿತ್ಯಪರಿಪೂರ್ಣ. ಇಂತಪ್ಪ ಜಂಗಮದ ನಿಲುವಿಗೆ ನಮೋ ನಮೋ ಎಂಬೆ ಕಾಣಾ. ಪರಮಗುರುವೆ ನಂಜುಂಡಶಿವಾ.