Index   ವಚನ - 14    Search  
 
ತನ್ನ ತನ್ನಿಂದ ತಾನರಿವ ಪರಿಯೆಂತುಟಯ್ಯಾಯೆಂದರೆ: ಪೃಥ್ವಿಯಪ್ಪು ತೇಜ ವಾಯು ಆಕಾಶವೆಂಬ ಪಂಚಭೂತಂಗಳು ತಾನಲ್ಲ. ಪ್ರಾಣೋಪಾನ ವ್ಯಾನೋದಾನ ಸಮಾನವೆಂಬ ಪಂಚಪ್ರಾಣವಾಯುಗಳು ತಾನಲ್ಲ. ಶ್ರೋತ್ರ ನೇತ್ರ ತ್ವಕ್ಕು ಜಿಹ್ವೆ ಘ್ರಾಣವೆಂಬ ಪಂಚಜ್ಞಾನೇಂದ್ರಿಯಂಗಳು ತಾನಲ್ಲ. ಶಬ್ದ ಸ್ಪರ್ಶ ರೂಪ ರಸ ಗಂಧವೆಂಬ ಪಂಚವಿಷಯಂಗಳು ತಾನಲ್ಲ. ಚಿತ್ತಬುದ್ದಿಯಹಂಕಾರ ಮನ ಜೀವವೆಂಬ ಪಂಚಕರಣಂಗಳು ತಾನಲ್ಲ. ತಾನಾರಾಯ್ಯಯೆಂದಡೆ, ಎಲ್ಲಾ ತತ್ವಂಗಳ ಕಳೆದುಳುಮೆಯೆ ತಾನು. ಅದೆಂತೆದಡೆ: ನೇತಿ ನೇತೀತಿ ನೇತಿ ಶೇಷಿತಂ ಯತ್ಪರಂ ಪದಂ | ನಿರಾಕರ್ತುಮಶಕ್ಯತ್ವಾತ್ತದಸ್ಮೀತಿ ಸುಖೀಭವಃ || ಪಂಚವಿಶಂತಿ ಪರ್ಯಂತಂ ಸಮಸ್ತಂ ನೇತಿ ನೇತಿ ಚ | ಹಿತ್ವಾ ಷಡ್ಮಿಂಶತಿ ಚೈವ ಸೋಹಂ ಬ್ರಹ್ಮೇತಿ ಪಶ್ಯತಿ || ಮನಃ ಚತುರ್ವಿಂಶಕಶ್ಚ ಜ್ಞಾತೃತ್ವಂ ಪಂಚವಿಂಶಕಃ | ಆತ್ಮಾಃ ಷಡ್ವಿಂಶಕಶ್ಚೈವ ಪರಮಾತ್ಮಾ ಸಪ್ತವಿಂಶಕಃ | ಚತುರ್ವಿಧಂತು ಮಾಯಾಂಶಂ ನಿರ್ಗುಣಃ ಪರಮೇಶ್ವರಃ || ಎಂದುದಾಗಿ, ಇಂತೀ ಇಪ್ಪತ್ತೇಳು ತತ್ವಂಗಳ ಕೊಂಡುನಿಂದ ನಿಜವು ತಾನೆ ನಮ್ಮ ಪರಮಗುರು ನಂಜುಂಡಶಿವಾ.