Index   ವಚನ - 18    Search  
 
ಪೃಥ್ವಿಯಪ್ಪು ಈ ಎರಡೂ ಸ್ಥೂಲತನು. ಅಧಿಕಾರಿ ವಿಶ್ವನೆಂಬ ಪುರುಷ ಜಾಗ್ರಾವಸ್ಥೆ. ಆತಂಗೆ ಸಾಕಾರಮಪ್ಪ ಇಷ್ಟಲಿಂಗ ಸಂಬಂಧವ ಕ್ರಿಯಾದೀಕ್ಷೆಯಿಂ ಮಾಡಿದಾತ ದೀಕ್ಷಾಗುರು. ಅಗ್ನಿವಾಯು ಇವೆರಡೂ ಸೂಕ್ಷ್ಮತನು. ಅಧಿಕಾರಿ ತೈಜಸನೆಂಬ ಪುರುಷ ಸ್ವಪ್ನಾವಸ್ಥೆ. ಆತಂಗೆ ಸಕಲ ನಿಃಕಲಮಪ್ಪ ಪ್ರಾಣಲಿಂಗಸಂಬಂಧವ ಮಂತ್ರದೀಕ್ಷೆಯಿಂ ಮಾಡಿದಾತ ಶಿಕ್ಷಾಗುರು. ಆಕಾಶ ಆತ್ಮ ಇವೆರಡೂ ಕಾರಣತನು. ಅಧಿಕಾರಿ ಪ್ರಾಜ್ಞನೆಂಬ ಪುರುಷ ಸುಷುಪ್ತಾವಸ್ಥೆ. ಆತಂಗೆ ನಿಃಕಲಮಪ್ಪ ಭಾವಲಿಂಗಸಂಬಂಧವ ವೇಧಾದೀಕ್ಷೆಯಿಂ ಮಾಡಿದಾತ ಮೋಕ್ಷಾಗುರು. ಅದೆಂತೆಂದಡೆ: ಸಾದೀಕ್ಷಾ ಪರಮಾಶೈವೀ ತ್ರಿಧಾ ಭವತಿ ನಿರ್ಮಲಾ | ಏಕವೇಧಾತ್ಮಿಕಾ ಸಾಕ್ಷಾದನ್ಯಮಂತ್ರಾತ್ಮಿಕಾ ಮತಾ|| ಕ್ರಿಯಾತ್ಮಿಕ ಪರಾಕಾಚಿತ್ ದೇವ ಏವ ತ್ರಿಧಾಭವೇತ್| ಸ್ಥೂಲಾಂಗೇ ಇಷ್ಟಲಿಂಗಂ ಚ ಸೂಕ್ಷ್ಮಾಂಗೇ ಪ್ರಾಣಲಿಂಗಕಂ || ಕಾರಣೇ ಭಾವಲಿಂಗಂ ಚ ಸುಪ್ರತಿಷ್ಠಿತಮಾತ್ಮನಿ | ವಿಶ್ವೋ ಜಾಗ್ರದವಸ್ಥಾಯಾಂ ಸ್ವಪ್ನಾಖ್ಯಾಯಾಂತು ತೈಜಸಃ|| ಪ್ರಾಜ್ಞಃ ಸುಷುಪ್ತವಾಸ್ಥಾಯಾಂ ಲಿಂಗತ್ರಯಮುಪಾಸತೇ | ದೀಕ್ಷಾ ಶಿಕ್ಷಾ ಚ ಮೋಕ್ಷಂ ಚ ಮಾಚಾರ್ಯಃ ತ್ರಿವಿಧೋ ಭವೇತ್ || ಎಂದುದಾಗಿ, ಇನ್ನು ಇಷ್ಟಲಿಂಗಕ್ಕೆ ಅಷ್ಟ ವಿಧಾರ್ಚನೆಯಂ ಮಾಡೂದು. ಪ್ರಾಣಲಿಂಗಕ್ಕೆ ಮನನ ಪೂಜೆಯಂ ಮಾಡೂದು. ಭಾವಲಿಂಗಕ್ಕೆ ಮನೋಲಯವೇ ಪೂಜೆ. ಅದೆಂತೆಂದಡೆ: ಅಷ್ಟವಿಧಾರ್ಚನಂ ಕುರ್ಯಾದ್ದಿಷ್ಟಲಿಂಗಸ್ಯ ಪೂಜನಂ | ತಲ್ಲಿಂಗಮನುತೇಯಸ್ತು ಪ್ರಾಣಲಿಂಗಸ್ಯ ಪೂಜನಂ | ಮನೋಲಯೋ ನಿರಂಜನ್ಯೇ ಭಾವಲಿಂಗಸ್ಯ ಪೂಜನಂ | ಏತಲ್ಲಿಂಗಾರ್ಚನಂ ಜ್ಞಾತ್ವಾ ವಿಶೇಷಂ ಶ್ರುಣು ಪಾರ್ವತಿ || ಪದಾರ್ಥಂಗಳ ರೂಪನರ್ಪಿಸೂದು. ಪ್ರಾಣಲಿಂಗಕ್ಕೆ ಮನದ ಮೈಮುಟ್ಟಿ, ಪದಾರ್ಥಂಗಳ ರುಚಿಯನರ್ಪಿಸೂದು. ಭಾವಲಿಂಗಕ್ಕೆ ಭಾವದ ಕೈ ಮುಟ್ಟಿ, ಪದಾರ್ಥಂಗಳ ತೃಪ್ತಿಯನರ್ಪಿಸೂದು. ಅದೆಂತೆಂದಡೆ: ಲಿಂಗೇ ಸಮರ್ಪಿತಂ ರೂಪಂ ರುಚಿಶ್ಚ ಜಂಗಮಾರ್ಪಿತಾ | ರುಚಿ ರೂಪ ಸಮಾಯುಕ್ತಂ ಗುರೋರರ್ಪಣಮುಚ್ಯತೇ || ರೂಪಂ ಸಮಾಗತಂ ಶುದ್ಧಂ ರುಚಿಸ್ಸ್ಯಾತ್ಸಿದ್ಧಸಂಜ್ಞಕಂ | ತನ್ಮಿಶ್ರಾರ್ಪಣಂ ಶಂಭೋಃ ಪ್ರಸಾದಂ ಚ ಪ್ರಸಿದ್ಧಕಂ || ಎಂದುದಾಗಿ, ರೂಪ ರುಚಿ ತೃಪ್ತಿಗಳನರ್ಪಿಸಿ, ಶುದ್ಧ ಸಿದ್ಧ ಪ್ರಸಿದ್ಧವೆಂಬ ಪ್ರಸಾದತ್ರಯವನು ವಿಶ್ವ ತೈಜಸ ಪ್ರಾಜ್ಞರೆಂಬ ಆತ್ಮತ್ರಯಕ್ಕೆ ಸಂಬಂಧಿಸೂದು. ಇಂತೀ ಲಿಂಗಾರ್ಚನಾರ್ಪಿತದ ಭೇದಂಗಳೆಲ್ಲ ತಿಳಿವ ತಿಳಿವಿನೊಳಗೆ ತೆರಹಿಲ್ಲದ ಕುರುಹಿಲ್ಲದ ಬರಿಯ ಬೆಳಗು ತಾನೆ, ನಮ್ಮ ಪರಮಗುರು ನಂಜುಂಡಶಿವನು.