Index   ವಚನ - 221    Search  
 
ಮೂರು ಸ್ಥಲದ ಮೂಲವನರಿಯರು, ಪುಣ್ಯಪಾಪವೆಂಬ ವಿವರವನರಿಯರು. ಇಹಪರವನರಿಯದೆ ಚರ್ಮದ ಬೊಂಬೆಯ ಮೆಚ್ಚಿ ಉಚ್ಚೆಯ ಬಚ್ಚಲಲ್ಲಿ ಬಿದ್ದಿರ್ಪ ಕರ್ಮದ ಸುನಿಗಳನೆಂತು ದೇವರೆಂಬೆನಯ್ಯಾ? ಹೊನ್ನು ವಸ್ತ್ರವ ಕೊಡುವವ[ನ] ಬಾಗಿಲ ಕಾಯ್ವ ಪಶುಪ್ರಾಣಿಗಳಿಗೆ ದೇವರೆನ್ನಬಹುದೇನಯ್ಯಾ? ಜಗದ ಕರ್ತನಂತೆ ವೇಷವ ಧರಿಸಿಕೊಂಡು ಸರ್ವವನು ಬೇಡಲಿಕೆ ಕೊಟ್ಟರೆ ಒಳ್ಳಿದನು, ಕೊಡದೆ ಇದ್ದರೆ ಪಾಪಿ, ಚಾಂಡಾಲ, ಅನಾಚಾರಿ ಎಂದು ದೂಷಿಸಿ ಒಳಹೊರಗೆಂದು ಬೊಗಳುವ ಮೂಳಮಾನವರಿಗೆ ಮಹಾಂತಿನ ಆಚರಣೆ ಎಲ್ಲಿಯದೊ? ಇಲ್ಲವೆಂದಾತ ನಮ್ಮಂಬಿಗರ ಚೌಡಯ್ಯ.