Index   ವಚನ - 4    Search  
 
ಗುರುಕರುಣದಿಂದಾದ ನ್ಯಾಯನಿರ್ಣಯ ಅನರ್ವಯವೆಂಬ ದಿನಸುಗಳು ಬಾಲಲೀಲಾ ವಾಕ್ಯಗಳಿಂದ ಆಧಾರದಲ್ಲಿ ಆಶ್ಚರ್ಯವಾಗಿ ಕೂಗುತಿರ್ಪವು ಅನುಭಾವಸಾರ. ಆದಿ ಬೀಜಾಕ್ಷರಮಂ ತ್ರಿವಿಧಸಂಧಾನದಿಂದ ಆಯಾಸವಿಲ್ಲದೆ ಆಚಾರಕ್ಕೆ ಸೇರ್ಪಡೆಯಾಗಿ, ವಿಚಾರದಿಂದ ನಾಮಾಮೃತಮಂ ಸ್ವೀಕರಿಸಿ, ಸದಾಚಾರ ಸನ್ನಹಿತವಾಗಿ ಅಗೋಚರ ಮಾರ್ಗವೆಂದರಿದು, ಗುಪ್ತಭಕ್ತಿಯಿಂದ ಉಮಾಶಕ್ತಿ ಭಿಕ್ಷಾಟನಂಗೈದು ಯುಕ್ತಿಜ್ಞಾನ ಆಪ್ತಾಲೋಚನದಿಂದ ಬಹುಮಾನದಿಂದ ಕರೆದುಂಡು ವಿರಕ್ತಿ ವೈರಾಗ್ಯ ಆನಂದವ ಆಚರಿಸಿ, ಮಾನಸ ವಾಚಕ ಕಾಯಕ ರೇಚಕ ಪೂರಕ ಕುಂಭಕವೆಂಬ ಷಡುವರ್ಣದ ದುರಾಚಾರಮಂ ಕಳೆದುಳಿದು, ಮಾಯಾಪ್ರಪಂಚದ ಆಟವೆನ್ನಲ್ಲಿ ಗಟ್ಟಿಗೊಂಡು, ರಾಯಭಾರಮಂ ನಡೆಸಿದ ಮಾಯಾವಿರಹಿತ ನೀನಲ್ಲ[ವೆ], ನಿಜಗುರು ನಿರಾಲಂಬಪ್ರಭುವೆ.