Index   ವಚನ - 28    Search  
 
ಮತ್ತಂ ಸಾಕ್ಷಿ: ಅಪ್ಪಯ್ಯ ಗುರುರಾಯ, ನಾನಾ ಅವಸ್ಥೆಗಳಲ್ಲಿ ಜ್ಞಾನಬಾಹ್ಯನಾಗಿ ಹೀನಸಂಸಾರವೆಂಬ ಸಾಗರದಲ್ಲಿ ತೇಲುತ್ತ ಮುಳುಗುತ್ತ ಕಾಣಲೊಲ್ಲದೆ, ವ್ಯರ್ಥಸ್ಯ ಕೆಡುವುದು, ಮಾನಗೇಡಿ ಭಂಗಗೇಡಿಯಾಗಿ ತಿರುಗುವುದು, ಏತರಿಂದಲೂ ಜೀವ ಶಿವರುಭಯಭಾವವನು ಒಂದೆಯೆಂದು ತಿಳಿದಾದ ಕಾರಣ, ಮಾತು ಮಾತಿಗೆ ಸಿಟ್ಟುಸೂತಕ ಜಾತಿಸೂತಕ ಜನನಸೂತಕ ಬಂಧವು. ಅಜ್ಞಾನ ವಶದಿಂದ ನಾನು ನನ್ನನ್ನು ಮರೆದಾದ ಕಾರಣ, ಭಾನುಪ್ರಕಾಶ ಬ್ರಹ್ಮಾಂಡದೊಳಗೊಂದು ಪಿಂಡಾಂಡ ಖಂಡಿತಾರ್ಥನ್ಯಾಯಮಂ ತಾನೆ ತಾನಾಗಿ ಇಹುದರಿಂದ ಈ ಅನರ್ವಯದಿಂದ ಅನುಭವಿಸುವಂಥ ಪ್ರಾರಬ್ಧವನು ಅನ್ಯತಾರ್ಥವೆಂದು ತಿಳಿದು, ತನ್ನೊಳಗೊಂದು ವಿಚಾರಮಂ ಗೋಪ್ಯವಾಗಲು, ಆ ಜ್ಞಾನಗುರುಮೂರ್ತಿಗಳು ಬಂದು, ತನು ಮನ ಧನ ಸಾಕ್ಷೀಭೂತನಾಗಿ, ಜನನಮರಣಂಗಳಲ್ಲಿ ತಪ್ಪುಗನ ಮಾಡಿ, ಮುಪ್ಪು ಆವರಿಸಿಕೊಂಡು ತಿಪ್ಪೆ ಉಪ್ಪರಿಗೆಯಾಗಲೆಂದು ತನ್ನ ಚರಣಕಮಲಮಂ ಜೋಡಿಸಿ, ನಮಸ್ಕಾರದಿಂದ ನಮಸ್ಕರಿಸಿ, ಕರ್ಣಬೋಧಮಂ ತುಂಬಿ, ವರ್ಣನಾಮಾಶ್ರಯದಿಂದ ತಿರುದುಂಡು ಬಾಳೆಂದು ಅಪ್ಪಿ ಮುದ್ದಾಡುವಂಥದು, ನಿಮ್ಮ ಧರ್ಮವು, ನಿಮ್ಮ ಸ್ವಧರ್ಮವಲ್ಲದೆ ಎನ್ನನು ಒಪ್ಪ ಹೆಸರುಗೊಂಡು ಕರೆವವರ ನಾನಾರನು ಕಾಣೆನಯ್ಯಾ, ಎಲೆಲಿಂಗವೆ, ಗುರು ಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ.