Index   ವಚನ - 40    Search  
 
ಮತ್ತಂ ಸಾಕ್ಷಿ: ಎಲೆ ಮಗನೆ ಕೇಳು: ತಿಳಿತಿಳಿದು ಲಕ್ಷವನಿಟ್ಟುಕೊಂಡು ಭಿಕ್ಷೆ ಬೇಡುವಂಥದು ಏತರ ಬಾಳುವೆ? ಗುರುದೀಕ್ಷಾಬದ್ಧರು ಕಾಂಕ್ಷವ ಮಾಡುವರಲ್ಲದೆ, ಜ್ಞಾನಾಪೇಕ್ಷೆ ತೀರಿದ ಬಳಿಕ ಮನೋಸಾಕ್ಷಿಯಲ್ಲವೆ. ಎಣಿಕೆ ತಪ್ಪಲು ದಿವಸಕೊಂದು ವೇಷ ಧರಿಸಲು, ಏತಕೂ ಸಲ್ಲದು, ಸಲುವಳಿಯಾಗದು. ಮಾತಿನದ್ವೈತವನು ಅಂತರಂಗದಲ್ಲಿಟ್ಟು, ಮಹಾವಾಕ್ಯ ಮಂತ್ರವೆಂಬ ಸ್ವತಂತ್ರದಲ್ಲಿ ಶತಮೋಕ್ಷ ನೀನಾಗುವುದೆ ಸಾಕ್ಷಿ. ಪ್ರತಿಯಿಲ್ಲದ ರೀತಿ ತಪ್ಪಿದ ಮನುಜರಿಗೆ ನೀತಿಶಾಸ್ತ್ರವನು ಹೇಳಲು ಜಾತಿಸಂಕಲ್ಪ ಬಿಡುವುದೆಂತು? ಸೋತು ಸುಮ್ಮನಿರಬೇಕೆಲ್ಲದೆ, ಮಾಡುವುದರಿಂದ ಭೂತಪ್ರಾಣಿಗಳು ಅತಿಶಯವಿಲ್ಲದೆ ಮತಿಗೊಂದು ಮಂತ್ರ ಸಾಕ್ಷಿ ಕೊಡುತಿರ್ಪರು. ಖ್ಯಾತಿ ಎನ್ನೊಳಡಗಿರ್ದ ಆತುರಮಂ ಕಾಣದೆ ಮಹತ್ವದಲ್ಲಿ ಮಲಿನವಾಗಿಹರು. ಎನ್ನ ಜಾತಿಯಭಿಮಾನಿಗಳಷ್ಟು ಕೂಡಿಕೊಂಡು, ಎಲೆ ಮಗನೆ, ಭಯಭೀತಿಯಿಲ್ಲದ ಅಭಯದ ಕರುಣಿಸುವೆನೆಂದು ದಾತ ಶ್ರೀಗುರುನಾಥನು ಪತಿವ್ರತಧರ್ಮ ಶಿವಾನುಭಾವಶಾಸ್ತ್ರಮಂ ಬೋಧಿಸಲು, ಖ್ಯಾತಿಯಿಂದತಿಶಯ ಸುಜಾತನಲ್ಲವೆ, ಎಲೆ ಲಿಂಗವೆ ಗುರುಶಂಭುಲಿಂಗವೆ ನಿಜಗುರು ನಿರಾಲಂಬಪ್ರಭುವೆ.