Index   ವಚನ - 13    Search  
 
ಇಚ್ಫಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿಗಳೆಂಬಲ್ಲಿ ಇಚ್ಫಾಶಕ್ತಿಗೆ ಪುರುಷನಾರು? ಕ್ರಿಯಾಶಕ್ತಿಗೆ ಪುರುಷನಾರು? ಜ್ಞಾನಶಕ್ತಿಗೆ ಪುರುಷನಾರು? ಜ್ಞಾತೃ, ಜ್ಞಾನ, ಜ್ಞೇಯವೆಂಬಲ್ಲಿ ಶಕ್ತಿಪುರುಷತ್ವಕ್ಕೆ ಸ್ಥೂಲ, ಸೂಕ್ಷ್ಮ, ಕಾರಣ ಇಂತೀ ತನುತ್ರಯದಲ್ಲಿ ಕಾಬುದೊಂದು ಕಾಣಿಸಿಕೊಂಬುದೊಂದು. ಉಭಯದ ಮನದಲ್ಲಿ ನಾನಾರೆಂಬುದ ಅರಿವುದದೇನು? ಮುಕುರವ ಹಿಡಿದು ನೋಡುವನಂತೆ ಹಿಡಿವವನಾರು, ಮುಕುರವೇನು? ಅಲ್ಲಿ ತೋರುವ ಬಿಂಬವೇನು? ಮುಕುರವೊಂದು, ನೋಡುವೆಡೆಯಲ್ಲಿ ಮೂರಾದ ಭೇದವನರಿತು ಆ ಮುಕುರವೇ ಶಕ್ತಿಯೊ, ಬಿಂಬವೇ ಪುರುಷನೊ? ಈ ಉಭಯವ ಸಂದೇಹಕ್ಕಿಕ್ಕಿ ನೋಡುವಾಗ ತ್ರಿವಿಧಶಕ್ತಿಯಲ್ಲಿ ಅಡಗಿತ್ತೆಂಬುದನರಿವುದಕ್ಕೆ ದೃಷ್ಟ: ತಿರುಳಿಲ್ಲದ ಬೀಜ ಬೆಳೆದುದುಂಟೆ? ಮೃತಘಟದ ಚಕ್ಷು ಲಕ್ಷಿಸಿ ಕಂಡುದುಂಟೆ? ಅಪ್ಪು ಬಟ್ಟೆಯಲ್ಲಿ ಹೋಹ ತೆಪ್ಪದ ಮೇ[ಗ]ಣವನಂತೆ ಒತ್ತುವುದು ನಿಂದಲ್ಲಿ ಅಪ್ಪು ತನ್ನ ಇಚ್ಫೆಗೆ ಆ ತೆಪ್ಪವ ಕೊಂಡು ಹೋಹ ತೆರದಂತೆ ಇಚ್ಫಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿಗಳೆಂಬವು ಜ್ಞಾತೃ, ಜ್ಞಾನ, ಜ್ಞೇಯಗಳೆಂಬವು ಸ್ಥೂಲ, ಸೂಕ್ಷ್ಮ, ಕಾರಣ ತನುತ್ರಯಂಗಳೆಂಬವು ಇಂತಿವೆಲ್ಲವು ಶಕ್ತಿಸಂಪುಟವಾಗಿ ದ್ವೈತಾದ್ವೈತಂಗಳಲ್ಲಿ ಹೊರಳಿ ಮರಳುವವಾಗಿ, ವೀಣೆಯ ನಿಚ್ಚಣಿಗೆಯಂತೆ ಸ್ಥಾನ ಸ್ವಸ್ಥಾನಂಗಳಲ್ಲಿ ನಿಂದು ಸಪ್ತಸ್ವರವ ಲಕ್ಷಿಸಿದಂತೆ ಇಂತೀ ಲಕ್ಷ ಜೀವಾಳದಲ್ಲಿ ಅಡಗಿ ಆ ಜೀವಾಳ ನಾದಕ್ಕೆ ಅರಸಾಗಿ ಆ ಭೇದದಂತೆ ಆತ್ಮತತ್ವ ನಿಶ್ಚಯಪದವಾಗಲಾಗಿ ಅದು ಐಕ್ಯಸ್ಥಲ ನಾಮನಷ್ಟಭೇದ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.