Index   ವಚನ - 37    Search  
 
ಜೀವಾತ್ಮನಳಿದು ಪರಮಾತ್ಮನಾಗಬೇಕೆಂಬಲ್ಲಿ ಆ ಪರಮಾತ್ಮನ ಪರವಶದಲ್ಲಿ ಬೆರೆಸಬೇಕೆಂಬುದು ಅದಾವಾತ್ಮ? ಸ್ಥೂಲ ಸೂಕ್ಷ್ಮ ಕಾರಣ ಇಂತೀ ತನುತ್ರಯಂಗಳಲ್ಲಿ ಕೀಳ ಬಿಟ್ಟು ಮೇಲ ಬೆರಸಬೇಕೆಂಬುದು ಅದಾವಾತ್ಮ? ಹಿಂದೆ ಮಾಡಿದ ಕರ್ಮವ ಇಂದರಿದು ಮುಂದಣ ಮುಕ್ತಿ ಎಂಬುದು ಅದಾವಾತ್ಮ? ತಿತ್ತಿಯಲ್ಲಿ ಹೊಕ್ಕ ವಾಯು ಒತ್ತಿದಡೆ ಹೋಗಿ ಎತ್ತಿದಡೆ ತುಂಬಿ ಮತ್ತೆ ಇರಿಸಿದಡೆ ಸತ್ತಹಾಗೆಯಿಪ್ಪುದು ಅದಾವಾತ್ಮ? ಮೃತ ಘಟ, ಚೇತನ ಘಟಂಗಳಲ್ಲಿ ಹೊರಳಿ ಮರಳುವುದು ಅದಾವಾತ್ಮ? ಇಂತೀ ಗುಣದ ವಾಯುಧಾರಣದಿಂದ ಅಷ್ಟಾಂಗಯೋಗ ಕರ್ಮಂಗಳ ಮಾಡುವ ಯೋಗಿಗಳೆಲ್ಲರೂ ಮುಕ್ತರಪ್ಪರೆ? ಭೂನಾಗ ಭೂಮಿಯೊಳಗಿದ್ದು ಉಸುರಿಂಗೆ ಉಬ್ಬಸವಿಲ್ಲದಂತೆ ಜಲಚರ ಜಲದಲ್ಲಿದ್ದು ಆ ಜಲವ ನಾಸಿಕ ಬಾಯಿಗೆ ಹೊಗಲೀಸದಂತೆ ನೇತ್ರ ಶ್ರೋತ್ರಂಗಳಲ್ಲಿ ಜಲವೆ ಮನೆಯಾಗಿ ಇಪ್ಪ ತೆರ. ಆವಾವ ಜಾತಿಗೂ ಆ ವಿಷಯಗೋತ್ರ ಲಕ್ಷಣಭೇದ. ಸಾಧಕ ಸಾಧನೆಗಳಿಂದ ಅಸಾಧ್ಯವ ಸಾಧಿಸಬಾರದು. ಅಸಾಧ್ಯ ವೇದ್ಯವಾದವ, ಕರ್ಮಕಾಂಡಿಯಲ್ಲ ತ್ರಿವಿಧಮಲಕ್ಕೆ ಸಲ್ಲ, ತಥ್ಯಮಿಥ್ಯವಿಲ್ಲ. ಹೆಚ್ಚು ಕುಂದೆಂಬ ಶರೀರಕ್ಕೆ ಚಿತ್ತದ ಭಾರದವನಲ್ಲ. ಸದ್ಭಕ್ತರ ಸದಮಲಯುಕ್ತರ ಸರ್ವವಿರಕ್ತರ ಷಟ್ ಸ್ಥಲಸಂಪನ್ನರ ಸರ್ವಾಂಗಲಿಂಗಿಗಳ ಅಂಗದಲ್ಲಿ ನಿಜ ಹಿಂಗದಿಪ್ಪ ಆತ ನಿರಂಗ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು.