Index   ವಚನ - 86    Search  
 
ವೇದವೆಂಬುದು ವಾದ, ವೈದಿಕತ್ವ ಮಾಯಾಭೇದ. ದೇವತಾ ದೇವತೆ ಕುಲ ಋಷಿ ಪ್ರಯೋಗಯಾಗಕ್ರಮ ದಿಗ್ವಳಯ ಬಂಧನ, ಗ್ರಹಸಂಬಂಧಯೋಗ. ಇಂತಿವು ಮೊದಲಾದ ಕರ್ಮಂಗಳಲ್ಲಿ ವ[ರ್ತಿ]ಸಿ ನಿಂದ ಸ್ವಯವಾವುದು? ಧರ್ಮಶಾಸ್ತ್ರವ ತಿಳಿದು, ಶಿಲ್ಪ ವೈದಿಕ ಜೋಯಿಸ ಇವು ಮುಂತಾದ ನಾನಾ ಭೇದಂಗಳ ಹೇಳಿ ತನ್ನ ಅಳಿವು ಉಳಿವು ಕಂಡುದಿಲ್ಲ. ಪುರಾಣವನೋದಿ ಕೆಲರ್ಗೆ ಹೇಳಿ ಪೂರ್ವಯಥಾಕಥನ ಮುಂತಾದ ರಾಮರಾವಣಾದಿಗಳು ಚಕ್ರವರ್ತಿಗಳು ಮುಂತಾದ ಧರ್ಮಕರ್ಮಂಗಳನೋದಿ ಬೋಧಿಸಿದಲ್ಲಿಯೂ ಸಫಲವಾದುದಿಲ್ಲ. ಇಂತಿವನ್ನೆಲ್ಲವನರಿತು, ಉಭಯಸಂಧಿಯ ಉಪೇಕ್ಷಿಸಿದಲ್ಲಿ ಬಿಡುಮುಡಿ ಉಭಯದ ಭೇದವ ತಾನರಿತು ಮಲತ್ರಯಕ್ಕೆ ದೂರಸ್ಥನಾಗಿ ತ್ರಿವಿಧಾತ್ಮಕ್ಕೆ ಅಳಿವು ಉಳಿವನರಿತು ಆರಾರ ಮನ ಧರ್ಮಂಗಳಲ್ಲಿ ಭೇದವಿಲ್ಲದೆ ನುಡಿದು ಅಭೇದ್ಯಮೂರ್ತಿಯ ತೋರಿ, ವಿಭೇದವ ಬಿಡಿಸಿ ತರಣಿಯ ಕಿರಣದಂತೆ, ವಾರಿಯ ಸಾರದಂತೆ 'ಖಲ್ವಿದಂ ಬ್ರಹ್ಮವಸ್ತು'ವೆಂದಲ್ಲಿ, ಏಕಮೇವನದ್ವಿತೀಯನೆಂದಲ್ಲಿ 'ಓಂ ಭರ್ಗೋ ದೇವಸ್ಯ ಧೀಮಹಿ' ಯೆಂದಲ್ಲಿ ಆದಿ ಪರಮೇಶ್ವರನೆಂದಲ್ಲಿ, ಆದಿ ಪುರುಷೋತ್ತಮನೆಂದಲ್ಲಿ ಆರಾರ ಭೇದಕ್ಕೆ ಭೇದ. ತ್ರಿಮೂರ್ತಿಗಳ ಜಗಹಿತಾರ್ಥವಾಗಿ ಸಂಶಯಸಿದ್ಧಿಯಿಂದ ತಿಳಿವುದು. ಸರ್ವಶಾಸ್ತ್ರದಿಂದ ಈ ಗುಣವಾಚಕರಿಗೆ ದೂಷಣದಿಂದ ನುಡಿವರಿಗೆ ಹಾಕಿದ ಮುಂಡಿಗೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾ ಎಂಬೆನು.