ಅಯ್ಯಾ, ಮತ್ತೊಂದು ವೇಳೆ
ಅಷ್ಟತನುವಿನ ಮೂಲಹಂಕಾರವನೆತ್ತಿ ಚರಿಸಿತಯ್ಯ.
ಅದೆಂತೆಂದಡೆ: ಆ ಮೂಲಹಂಕಾರವೆ ಷೋಡಶಮದವಾಗಿ
ಬ್ರಹ್ಮನ ಶಿರವ ಕಳೆಯಿತಯ್ಯ,
ವಿಷ್ಣುವನು ಹಂದಿಯಾಗಿ ಹುಟ್ಟಿಸಿತಯ್ಯ.
ಇಂದ್ರನ ಶರೀರವ ಭವದ ಬೀಡು ಯೋನಿದ್ವಾರವ ಮಾಡಿತಯ್ಯ.
ಸೂರ್ಯ ಚಂದ್ರರ ಭವರಾಟಾಳದಲ್ಲಿ ತಿರಿಗಿಸಿತಯ್ಯ.
ಆ ಮದಂಗಳಾವುವೆಂದಡೆ:
ಕುಲಮದ, ಛಲಮದ, ಧನಮದ, ಯೌವನಮದ,
ರೂಪುಮದ, ವಿದ್ಯಾಮದ, ರಾಜ್ಯಮದ, ತಪಮದ,
ಸಂಸ್ಥಿತ, ತೃಣೀಕೃತ, ವರ್ತಿನಿ, ಕ್ರೋಧಿನಿ, ಮೋಹಿನಿ,
ಅತಿಚಾರಿಣಿ, ಗಂಧಚಾರಿಣಿ, ವಾಸಿನಿ ಎಂಬ
ಷೋಡಶಮದದ ಸಂದಿನಲ್ಲಿ ಎನ್ನ ಕೆಡಹಿ,
ಬಹುದುಃಖದಲ್ಲಿ ಅಳಲಿಸಿತಯ್ಯ.
ಗುರುವೆ, ಇಂಥ ದುರ್ಜೀವ
ಮನದ ಸಂಗವ ತೊಲಗಿಸಿ ಕಾಯಯ್ಯ
ಕರುಣಾಳುವೆ, ಸಚ್ಚಿದಾನಂದಮೂರ್ತಿ ಭವರೋಗವೈದ್ಯನೆ
ಶ್ರೀಗುರುಲಿಂಗಜಂಗಮವೆ,
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.
Art
Manuscript
Music
Courtesy:
Transliteration
Ayyā, mattondu vēḷe
aṣṭatanuvina mūlahaṅkāravanetti carisitayya.
Adentendaḍe: Ā mūlahaṅkārave ṣōḍaśamadavāgi
brahmana śirava kaḷeyitayya,
viṣṇuvanu handiyāgi huṭṭisitayya.
Indrana śarīrava bhavada bīḍu yōnidvārava māḍitayya.
Sūrya candrara bhavarāṭāḷadalli tirigisitayya.
Ā madaṅgaḷāvuvendaḍe:
Kulamada, chalamada, dhanamada, yauvanamada, Rūpumada, vidyāmada, rājyamada, tapamada,
sansthita, tr̥ṇīkr̥ta, vartini, krōdhini, mōhini,
aticāriṇi, gandhacāriṇi, vāsini emba
ṣōḍaśamadada sandinalli enna keḍahi,
bahuduḥkhadalli aḷalisitayya.
Guruve, intha durjīva
manada saṅgava tolagisi kāyayya
karuṇāḷuve, saccidānandamūrti bhavarōgavaidyane
śrīguruliṅgajaṅgamave,
harahara śivaśiva jayajaya karuṇākara
matprāṇanātha mahāśrīgurusid'dhaliṅgēśvara.