Index   ವಚನ - 30    Search  
 
ಅಯ್ಯಾ, ಮತ್ತೊಂದು ವೇಳೆ ಕಾಮವಿಕಾರದಿಂದ ತೊಳಲಿಸಿತಯ್ಯ, ಕ್ರೋಧದ ಸಂದಿನಲ್ಲಿ ಕೆಡಹಿತಯ್ಯ. ಲೋಭದ ಪಾಶದಲ್ಲಿ ನೂಂಕಿತಯ್ಯ. ಮೋಹಮದಮತ್ಸರದ ಬಲೆಯಲ್ಲಿ ಸಿಲ್ಕಿಸಿತಯ್ಯ. ಸತ್ವ-ರಜ-ತಮವೆಂಬ ತ್ರಿಗುಣಂಗಳಲ್ಲಿ ನುಗ್ಗುನುರಿ ಮಾಡಿತಯ್ಯ. ಗಂಧ ರಸ ರೂಪು ಸ್ಪರ್ಶನ ಶಬ್ದ ಮೊದಲಾದ ಸಮಸ್ತ ವಿಷಯದಲ್ಲಿ ಕಂದಿಕುಂದಿಸಿತಯ್ಯ. ಇಂಥ ದುರಾಚಾರಿ ದುರ್ಜೀವ ಮನವ ಎಂದಿಗೆ ಪರಿಹರಿಸುವಿಯೊ? ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.