ಅಪ್ಪು ಬಲಿದು ಪೃಥ್ವಿಯ ಮೇಲೆ
ಶತಕೋಟಿ ಸಹಸ್ರಕೋಟಿ ಬಯಲಿಂದತ್ತ ಭರಿತವಪ್ಪುದೊಂದು ರಥ.
ಆ ರಥಕ್ಕೆ ಬ್ರಹ್ಮ ವಿಷ್ಣು ಸೂರ್ಯ ಚಂದ್ರ (?)
ವೇದಶಾಸ್ತ್ರಪುರಾಣಸಕಲಾಗಮಪ್ರಮಾಣಗೂಡಿದ ಷಟ್ಕಲೆ
ಮೇರುಮಂದಿರವೆಂಬ ಅಚ್ಚುಗಂಬವ ನೆಟ್ಟಿದೆ.
ಆ ರಥದ ಸುತ್ತಲು ದೇವಾದಿದೇವರ್ಕಳೆಲ್ಲರ ತಂದು ಸಾರಥಿಯನಿಕ್ಕಿ
ಆ ರಥದ ನಡುಮಧ್ಯಸ್ಥಾನದಲ್ಲಿ ಅಷ್ಟದಳಕಮಲವಾಗಿ
ಅನಂತಸಹಸ್ರಕೋಟಿ ಕಮಲಪದ್ಮಾಸನವ ರಚಿಸಿದೆ.
ಆ ಪದ್ಮಾಸನದ ಮೇಲೆ ಶಂಭು ಸದಾಶಿವನೆಂಬ
ಮಹಾದೇವನ ತಂದು ನೆಲೆಗೊಳಿಸಿದೆ.
ಆ ರಥದ ಪೂರ್ವಬಾಗಿಲಲ್ಲಿ ಆದಿಶಕ್ತಿಯ ನಿಲಿಸಿದೆ.
ಉತ್ತರ ಬಾಗಿಲಲ್ಲಿ ಓಂ ಪ್ರಣಮಸ್ವರೂಪಿಣಿಯೆಂಬ ಶಕ್ತಿಯ ನಿಲಿಸಿದೆ.
ಆ ಪಶ್ಚಿಮಬಾಗಿಲಲ್ಲಿ ಕ್ರಿಯಾಶಕ್ತಿಯ ನಿಲಿಸಿದೆ.
ದಕ್ಷಿಣದ ಬಾಗಿಲಲ್ಲಿ ಚಿಚ್ಫಕ್ತಿಯ ನಿಲಿಸಿದೆ.
ಭೈರವ ವಿಘ್ನೇಶ್ವರ ಷಣ್ಮುಖ ವೀರಭದ್ರರೆಂಬ ನಾಲ್ಕು ಧ್ವಜಪಟಗಳನೆತ್ತಿ,
ಆ ರಥದ ಅಷ್ಟದಿಕ್ಕುಗಳಲ್ಲಿ
ನಾನಾ ಚಿತ್ರವಿಚಿತ್ರವೈಭವಂಗಳೆಂಬ ಕೆಲಸವ ತುಂಬಿ,
ಅದರ ಗಾಲಿಯ ಕೀಲುಗಳಲ್ಲಿ
ಈರೇಳುಭುವನವೆಂಬ ಹದಿನಾಲ್ಕುಲೋಕಂಗಳ
ಧರಿಸಿ ಆಡುತ್ತಿರ್ಪವು.
ಅನಾದಿ ಶೂನ್ಯವೆಂಬ ಮಹಾರಥದೊಳಗಿಪ್ಪ
ನಮ್ಮ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ
ರಾಜೇಶ್ವರಲಿಂಗವು ನಿರಾಳ ನಿಶ್ಚಿಂತ ನಿರ್ಲೇಪನು.